ಹಾರ್ಮುಝ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಮೇಲೆ ಅಪ್ಪಳಿಸಿದ ʼಅಪರಿಚಿತ ಕ್ಷಿಪಣಿʼ
ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ಮಾಡಿದೆ : ಅಮೆರಿಕ ಆರೋಪ
ಲಂಡನ್: ಸೋಮವಾರ ಒಮಾನ್ ಕರಾವಳಿಯಲ್ಲಿ ಹಾರ್ಮುಝ್ ಜಲಸಂಧಿ ಬಳಿ ತೈಲ ಟ್ಯಾಂಕರ್‌ಗೆ ಅಪರಿಚಿತ ಕ್ಷಿಪಣಿ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಯುಕೆಎಂಟಿಒ ಹೇಳಿದೆ. ಇದರ ಬೆನ್ನಲ್ಲೆ ಇರಾನ್ ಎರಡು ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡಿದೆ ಎಂದು ಅಮೆರಿಕ ಆರೋಪಿಸಿದೆ.
ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಮತ್ತು ಶಾಶ್ವತವಾದ ಶಾಂತಿ ಒಪ್ಪಂದ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಈ ಘಟನೆ ಒಮಾನ್‌ನ ಲಿಮಾಹ್ ಪ್ರದೇಶದಿಂದ ಸುಮಾರು ಎಂಟು ನಾಟಿಕಲ್ ಮೈಲುಗಳ ಪೂರ್ವಕ್ಕೆ ನಡೆದಿದೆ. ದಕ್ಷಿಣ ದಿಕ್ಕಿನತ್ತ ಸಾಗುತ್ತಿದ್ದ ಟ್ಯಾಂಕರ್ ಮೇಲೆ ಕ್ಷಿಪಣಿ ಅಪ್ಪಳಿಸಿದ್ದರಿಂದ ಭಾರೀ ಬೆಂಕಿ ಹೊತ್ತಿಕೊಂಡಿದೆ ಎಂದು UKMTO ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಪರಿಸರ ಹಾನಿಯ ಬಗ್ಗೆ ವರದಿಯಾಗಿಲ್ಲ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಎಚ್ಚರಿಕೆಯಿಂದ ಸಂಚರಿಸಬೇಕು ಹಾಗೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಯುಕೆಎಂಟಿಒ ತಿಳಿಸಿದೆ.
ಮಧ್ಯಪ್ರಾಚ್ಯ ಯುದ್ಧದ ಸಮಯದಲ್ಲಿ ಹಾರ್ಮುಝ್ ಜಲಸಂಧಿಯು ಉದ್ವಿಗ್ನತೆಯ ಕೇಂದ್ರವಾಗಿತ್ತು. ಇರಾನ್ ಜಲಮಾರ್ಗವನ್ನು ನಿರ್ಬಂಧಿಸಿತ್ತು. ಈ ವೇಳೆ ಹಲವಾರು ವಾಣಿಜ್ಯ ಹಡಗುಗಳ ಮೇಲೆ ದಾಳಿಯೂ ನಡೆದಿತ್ತು. ಇದರಿಂದ ಜಾಗತಿಕವಾಗಿ ಇಂಧನ ಬೆಲೆ ಹೆಚ್ಚಳವಾಗಿತ್ತು.