"ಪ್ರಾಣಕ್ಕೆ ಅಪಾಯವಿದೆ" : ಇಸ್ರೇಲ್ ಬಂಧನದಲ್ಲಿರುವ ಫೆಲೆಸ್ತೀನ್ ವೈದ್ಯ ಡಾ.ಹುಸ್ಸಾಮ್ ಅಬು ಸಫಿಯ ಬಿಡುಗಡೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಒತ್ತಾಯ
ಡಾ.ಹುಸ್ಸಾಮ್ ಅಬು ಸಫಿಯ | Photo Credit :X\ @DonaldBKipkorir
ಜೆನೇವಾ: ಇಸ್ರೇಲ್‌ನಿಂದ ಬಂಧನಕ್ಕೊಳಗಾಗಿರುವ ಫೆಲೆಸ್ತೀನ್ ವೈದ್ಯ ಡಾ.ಹುಸ್ಸಾಮ್ ಅಬು ಸಫಿಯ ಅವರ ಪ್ರಾಣಕ್ಕೆ ತೀವ್ರ ಅಪಾಯವಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯು ಎಚ್ಚರಿಸಿದ್ದು, ಬಂಧನದಿಂದ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
ಇಸ್ರೇಲ್‌ನ ಈ ಕ್ರಮವು ಮಾನವ ಹಕ್ಕುಗಳು ಮತ್ತು ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದದ ವಿಧಿಗಳನ್ನು ಉಲ್ಲಂಘಿಸಿದೆ ಎಂದು ಉಲ್ಲೇಖಿಸಿದೆ.
"ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಅವರಿಗೆ ಪರಿಹಾರ ಕ್ರಮಗಳನ್ನು ಪಡೆಯುವ ಹಕ್ಕನ್ನು ನೀಡಬೇಕು" ಎಂದು ಸಮಿತಿಯು ಹೇಳಿದೆ.
ಅಬು ಸಫಿಯಾ ಅವರ ಪ್ರಕರಣವು ತಾವು ತನಿಖೆ ನಡೆಸಿದ ಹಲವು ಪ್ರಕರಣಗಳಲ್ಲಿ ಒಂದಾಗಿದೆ ಮತ್ತು ಇದು ಇಸ್ರೇಲ್ ದೇಶದಲ್ಲಿ ಚಾಲ್ತಿಯಲ್ಲಿರುವ ವ್ಯಾಪಕ ಅನಿಯಂತ್ರಿತ ಬಂಧನವನ್ನು ಸೂಚಿಸುತ್ತದೆ" ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯು ಹೇಳಿದೆ.
ಅಬು ಸಫಿಯ ಅವರ ವಕೀಲ ನಾಸರ್ ಓದೆಹ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವೈದ್ಯರ ಮೇಲೆ ಪ್ರತಿದಿನ ಕ್ರೂರ ದೌರ್ಜನ್ಯ ಎಸಗಲಾಗುತ್ತಿದ್ದು, ಅವರ ಆರೋಗ್ಯವು ಗಂಭೀರ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ. ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಅಬು ಸಫಿಯ ಕುಟುಂಬ ಕೂಡಾ ಇದೇ ಆರೋಪವನ್ನು ಮಾಡಿದ್ದು, ಅವರು ನಿರಂತರ ಚಿತ್ರಹಿಂಸೆಗೆ ಒಳಗಾಗಿರುವುದು ಕಂಡುಬರುತ್ತಿದೆ ಎಂದು ತಿಳಿಸಿದೆ.
ಈ ಕುರಿತು ಇಸ್ರೇಲ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಅಬು ಸಫಿಯ ಮತ್ತು ಇತರ ವೈದ್ಯರ ಮೇಲೆ ಜೈಲಿನಲ್ಲಿ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪವನ್ನು ಇಸ್ರೇಲ್ ತಿರಸ್ಕರಿಸಿತ್ತು. ಇಸ್ರೇಲ್‌ನ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ ಮೇಲ್ಮನವಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿತ್ತು.
ಗಾಝಾದ ಕಮಾಲ್ ಅದ್ವಾನ್ ಆಸ್ಪತ್ರೆಯ ನಿರ್ದೇಶಕರಾಗಿದ್ದ ಅಬು ಸಫಿಯರನ್ನು ಡಿಸೆಂಬರ್ 2024ರಲ್ಲಿ ಇತರ ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳೊಂದಿಗೆ ಬಂಧಿಸಲಾಗಿದೆ. ಇಲ್ಲಿಯವರೆಗೆ ಅವರ ಮೇಲೆ ಯಾವುದೇ ಅಧಿಕೃತ ಆರೋಪ ಹೊರಿಸದೆ ಬಂಧನದಲ್ಲಿಡಲಾಗಿದೆ.
ಗಾಝಾದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಬಗ್ಗೆ ಜಗತ್ತಿನ ಗಮನ ಸೆಳೆಯುವಲ್ಲಿ ಡಾ.ಹುಸ್ಸಾಮ್ ಅಬು ಸಫಿಯ ಪ್ರಮುಖ ಪಾತ್ರವಹಿಸಿದ್ದರು. ಇಸ್ರೇಲ್ ಡ್ರೋನ್ ದಾಳಿಯಲ್ಲಿ ತಮ್ಮ ಮಗು ಮೃತಪಟ್ಟ ಬಳಿಕವೂ ಅವರು ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಅವರು ಇತರ ಆರೋಗ್ಯ ಕಾರ್ಯಕರ್ತರಂತೆ ರೋಗಿಗಳ ಆರೈಕೆ ಮಾಡುತ್ತಿದ್ದ ಸಂದರ್ಭದಲ್ಲೇ ಬಂಧನಕ್ಕೊಳಗಾಗಿದ್ದರು.