Damascus | ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಭೇಟಿ ವೇಳೆ ಡಮಾಸ್ಕಸ್ ನಲ್ಲಿ ಸ್ಫೋಟ: ಭದ್ರತೆ ಕುರಿತು ಆತಂಕ
ಡಮಾಸ್ಕಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಸಿರಿಯಾಗೆ ಭೇಟಿ ನೀಡಿದ್ದ ವೇಳೆ ಅವರು ತಂಗಿದ್ದ ಹೋಟೆಲ್ ಸಮೀಪ ಮಂಗಳವಾರ ಬಾಂಬ್ ಸ್ಫೋಟಗಳು ಸಂಭವಿಸಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಆದರೆ ಸ್ಫೋಟಗಳ ಶಬ್ದ ಮ್ಯಾಕ್ರನ್ ಅವರಿಗೆ ಕೇಳಿಸಲಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷರ ಕಚೇರಿ ಎಲಿಸೀ ಅರಮನೆ ತಿಳಿಸಿದೆ. ಬಳಿಕ ಮ್ಯಾಕ್ರನ್ ಅವರು ಸಿರಿಯಾದ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
2024ರಲ್ಲಿ ಅಹ್ಮದ್ ಅಲ್-ಶರಾ ನೇತೃತ್ವದ ಬಂಡುಕೋರರು ಬಶರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ಸಿರಿಯಾಗೆ ಭೇಟಿ ನೀಡಿದ ಯುರೋಪಿಯನ್ ಒಕ್ಕೂಟದ ಮೊದಲ ರಾಷ್ಟ್ರದ ಮುಖ್ಯಸ್ಥ ಮ್ಯಾಕ್ರನ್ ಆಗಿದ್ದಾರೆ. ಅವರ ಭೇಟಿಯ ವೇಳೆ ನಡೆದ ಸ್ಫೋಟಗಳು ಸಿರಿಯಾ ಇನ್ನೂ ಗಂಭೀರ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವುದನ್ನು ಎತ್ತಿ ತೋರಿಸಿವೆ.
ಘಟನೆಯ ಬಳಿಕ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ ಎಂದು Reuters.com ವರದಿ ಮಾಡಿದೆ.
ಮ್ಯಾಕ್ರನ್ ಅವರ ವಾಹನ ಸಂಚರಿಸುತ್ತಿದ್ದ ವೇಳೆ ಯಾವುದೇ ಸ್ಫೋಟದ ಶಬ್ದ ಕೇಳಿಸಲಿಲ್ಲ ಎಂದು ಎಲಿಸೀ ಅರಮನೆ ಸ್ಪಷ್ಟಪಡಿಸಿದೆ. ಅಧ್ಯಕ್ಷರೊಂದಿಗೆ ಪ್ರಯಾಣಿಸುತ್ತಿದ್ದ ಪತ್ರಕರ್ತರ ತಂಡದಲ್ಲಿದ್ದ ರಾಯಿಟರ್ಸ್ ವರದಿಗಾರರಿಗೂ ಮ್ಯಾಕ್ರನ್ ಅವರ ಬೆಳಗಿನ ಕಾರ್ಯಕ್ರಮಗಳ ಸಂದರ್ಭದಲ್ಲಿ ಯಾವುದೇ ಸ್ಫೋಟದ ಶಬ್ದ ಕೇಳಿಸಲಿಲ್ಲ ಅಥವಾ ಯಾವುದೇ ಗದ್ದಲ ಕಂಡುಬರಲಿಲ್ಲ ಎಂದು ತಿಳಿದು ಬಂದಿದೆ.
ಇದಾದ ಬಳಿಕ ಮ್ಯಾಕ್ರನ್ ಮತ್ತು ಅಹ್ಮದ್ ಅಲ್-ಶರಾ ಅವರು ಡಮಾಸ್ಕಸ್ ನ ಅಧ್ಯಕ್ಷರ ಅರಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಸಿರಿಯಾದ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ.