×
Ad

ಲಂಡನ್: ಭಾರತೀಯ ಹೈಕಮಿಷನ್ ಎದುರು ಖಾಲಿಸ್ತಾನಿ ಪರ ಪ್ರತಿಭಟನೆ

Update: 2023-10-03 22:09 IST

PHOTO: NDTV 

ಲಂಡನ್ : ಖಾಲಿಸ್ತಾನಿ ಪರ ಗುಂಪೊಂದು ಸೋಮವಾರ ಲಂಡನ್‍ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯೆದುರು ಪ್ರತಿಭಟನೆ ನಡೆಸಿದೆ ಎಂದು ವರದಿಯಾಗಿದೆ.

ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಆರೋಪದ ಬಗ್ಗೆ ಗಮನ ಸೆಳೆಯಲು ಈ ಪ್ರತಿಭಟನೆ ಆಯೋಜಿಸಲಾಗಿದೆ. ಸಂಘಟನೆಯ ಕಾರ್ಯಕರ್ತ ಅವ್ತಾರ್ ಸಿಂಗ್ ಖಾಂಡಾನ ಅನುಮಾನಾಸ್ಪದ ಸಾವು ಸೇರಿದಂತೆ ಇತರ ಹಲವು ದೇಶೀಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು `ಬ್ರಿಟಿಷ್ ಸಿಖ್ ಗ್ರೂಪ್ಸ್' ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿತ್ತು.

ಮಧ್ಯ ಲಂಡನ್‍ನ ಅಲ್ಡ್‍ವಿಚ್‍ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯೆದುರು ಮೆಟ್ರೊಪಾಲಿಟನ್ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು. ಸುಮಾರು ಎರಡೂವರೆ ಗಂಟೆ ನಡೆದ ಪ್ರತಿಭಟನೆಯಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದು ಪಂಜಾಬಿ ಭಾಷೆಯಲ್ಲಿ ಭಾಷಣ ಮಾಡಿದ ಬಳಿಕ ಖಾಲಿಸ್ತಾನಿ ಪರ ಘೋಷಣೆ ಕೂಗಿದ್ದಾರೆ.

ಇದಕ್ಕೂ ಮುನ್ನ ಲಂಡನ್‍ನಲ್ಲಿ ಸುದ್ಧಿಗೋಷ್ಟಿ ನಡೆಸಿದ್ದ ಬ್ರಿಟನ್ ಸಿಖ್ ಫೆಡರೇಷನ್, ಬರ್ಮಿಂಗ್ಹಾಮ್‍ನಲ್ಲಿ ಜೂನ್‍ನಲ್ಲಿ ನಡೆದ ಖಾಲಿಸ್ತಾನಿ ಪರ ಕಾರ್ಯಕರ್ತ ಅವ್ತಾರ್ ಸಿಂಗ್ ಖಾಂಡಾನ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಇಂಗ್ಲೆಂಡ್ ಮತ್ತು ವೇಲ್ಸ್‍ನ ಮುಖ್ಯ ನ್ಯಾಯಾಧಿಕಾರಿಗೆ ಮನವಿ ಮಾಡಿದೆ. `ಖಾಂಡಾಗೆ ಭಾರತದ ರಾಜಕೀಯ ಕ್ಷೇತ್ರದಲ್ಲಿ ಸಂಪರ್ಕ ಇರುವ ವ್ಯಕ್ತಿಗಳಿಂದ ಜೀವಬೆದರಿಕೆ ಇತ್ತು. ಆದ್ದರಿಂದ ಈ ಸಾವಿನ ಪ್ರಕರಣದ ತನಿಖೆ ಅಗತ್ಯವಾಗಿದೆ' ಎಂದು ಖಾಂಡಾ ಕುಟುಂಬದ ವಕೀಲ ಮೈಕಲ್ ಪೊಲಾಕ್ ಆಗ್ರಹಿಸಿದ್ದಾರೆ.

ಆದರೆ ಅವ್ತಾರ್ ಸಿಂಗ್ ಖಾಂಡಾ ರಕ್ತದ ಕ್ಯಾನ್ಸರ್‍ನಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News