Photo Credit : PTI 

ಕೋಲ್ಕತ್ತಾ: ಸಮುದ್ರ ಮಟ್ಟ ಏರುತ್ತಿರುವುದರಿಂದ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುವ ‘ತಕ್ಷಣದ ಅಪಾಯ’ದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ‘ಸಮುದ್ರ ಮಟ್ಟ ಏರಿಕೆಗೆ ಸಂಬಂಧಿಸಿದ ಸವಾಲುಗಳು ಮತ್ತು ಅದನ್ನು ಎದುರಿಸುವ ಮಾರ್ಗಗಳು’ ಎಂಬ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

ಸಮುದ್ರ ಮಟ್ಟ ಏರಿಕೆ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಯಲ್ಲ; ಅದರ ಪರಿಣಾಮ ಈಗಾಗಲೇ ಕಾಣಿಸಿಕೊಳ್ಳುತ್ತಿದೆ. ಹಿಂದೆಂದಿಗಿಂತಲೂ ವೇಗವಾಗಿ ಸಮುದ್ರ ಮಟ್ಟ ಏರುತ್ತಿದೆ. ಈ ವೇಗ ಮತ್ತಷ್ಟು ಹೆಚ್ಚುತ್ತಿರುವುದರಿಂದ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ಜನರಿಗೆ ಇದು ದೊಡ್ಡ ಅಪಾಯವಾಗಿದೆ ಎಂದು ವರದಿ ಹೇಳಿದೆ.

ಸಮುದ್ರ ಮಟ್ಟ ಏರಿಕೆಯಿಂದ ನಗರಗಳ ಮೂಲಸೌಕರ್ಯ, ನೀರು ಪೂರೈಕೆ ವ್ಯವಸ್ಥೆ, ಸಾರಿಗೆ ಜಾಲ, ವಿದ್ಯುತ್ ವ್ಯವಸ್ಥೆ, ಕಟ್ಟಡಗಳು ಮತ್ತು ಅಂತರ್ಜಲ ಸಂಪನ್ಮೂಲಗಳಿಗೆ ಈಗಾಗಲೇ ಹಾನಿಯಾಗುತ್ತಿದೆ. ಇದರಿಂದ ಜನರ ಹಕ್ಕುಗಳು, ದೀರ್ಘಕಾಲೀನ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತಿದೆ.

►ಪ್ರದೇಶದಿಂದ ಪ್ರದೇಶಕ್ಕೆ ಅಪಾಯ ವಿಭಿನ್ನ

ಸಮುದ್ರ ಮಟ್ಟ ಏರಿಕೆಯ ಪರಿಣಾಮ ಎಲ್ಲೆಡೆಯೂ ಒಂದೇ ರೀತಿಯಲ್ಲ. ಅಮೆರಿಕದ ಮಿಯಾಮಿ ಮತ್ತು ನ್ಯೂಯಾರ್ಕ್, ಚೀನಾದ ಗುವಾಂಗ್ಝೌನಂತಹ ಶ್ರೀಮಂತ ನಗರಗಳಲ್ಲಿ ಕರಾವಳಿ ಮೂಲಸೌಕರ್ಯಕ್ಕೆ ಉಂಟಾಗುವ ಆರ್ಥಿಕ ನಷ್ಟವೇ ಪ್ರಮುಖ ಅಪಾಯವಾಗಿದೆ. ಈ ನಗರಗಳಲ್ಲಿ 2 ಟ್ರಿಲಿಯನ್ನಿಂದ 3.5 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿಗಳು ಅಪಾಯದಲ್ಲಿವೆ ಎಂದು ಅಂದಾಜಿಸಲಾಗಿದೆ.

ಆದರೆ ದಕ್ಷಿಣ ಏಷ್ಯಾದ ತಗ್ಗು ಪ್ರದೇಶಗಳಲ್ಲಿರುವ ಕೋಲ್ಕತ್ತಾ, ಮುಂಬೈ ಮತ್ತು ಬಾಂಗ್ಲಾದೇಶದ ಢಾಕಾದಂತಹ ನಗರಗಳಲ್ಲಿ ಜನರ ಸ್ಥಳಾಂತರವೇ ದೊಡ್ಡ ಸಮಸ್ಯೆಯಾಗಲಿದೆ.

1.4 ಕೋಟಿಗೂ ಅಧಿಕ ಜನರು ಶಾಶ್ವತ ಪ್ರವಾಹದಿಂದಾಗಿ ತಮ್ಮ ಮನೆಗಳನ್ನು ಕಳೆದುಕೊಳ್ಳುವ ತಕ್ಷಣದ ಅಪಾಯದಲ್ಲಿದ್ದಾರೆ ಎಂದು ವರದಿ ಹೇಳಿದೆ.

ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಮಟ್ಟ ಏರಿಕೆಯಿಂದ ಉಂಟಾಗುವ ಅಪಾಯವನ್ನು ಅಳೆಯುವಾಗ ಕೇವಲ ಆರ್ಥಿಕ ನಷ್ಟವನ್ನು ಪರಿಗಣಿಸಬಾರದು. ಮನೆ ಕಳೆದುಕೊಂಡು ಜನರು ಸ್ಥಳಾಂತರಗೊಳ್ಳುವುದು ಮತ್ತು ಜೀವಹಾನಿಯಾಗುವುದು ಸೇರಿದಂತೆ ಜನರ ಮೇಲಿನ ಪರಿಣಾಮಗಳನ್ನೂ ಪರಿಗಣಿಸಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.

►ಆರೋಗ್ಯಕ್ಕೂ ಅಪಾಯ

ಸಮುದ್ರ ಮಟ್ಟ ಏರಿಕೆಯಿಂದ ಕರಾವಳಿ ಪ್ರದೇಶಗಳ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಳಿಗೆ ಹಾನಿಯಾಗಬಹುದು. ಇದರಿಂದ ನೀರಿನಿಂದ ಹರಡುವ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ನೈರ್ಮಲ್ಯ ವ್ಯವಸ್ಥೆ ಅಸ್ತವ್ಯಸ್ತವಾಗುವುದರ ಜತೆಗೆ ಗಾಯಗಳು ಮತ್ತು ಸಾವುಗಳ ಅಪಾಯವೂ ಹೆಚ್ಚಬಹುದು. ಜನರ ಮಾನಸಿಕ ಆರೋಗ್ಯದ ಮೇಲೂ ಒತ್ತಡ ಹೆಚ್ಚುವ ಸಾಧ್ಯತೆ ಇದೆ.

ಸಮುದ್ರ ಮಟ್ಟ ಏರಿಕೆ ಮತ್ತು ಭೂ ಕುಸಿತ ಒಂದಕ್ಕೊಂದು ಸೇರಿಕೊಂಡಾಗ ಪ್ರವಾಹದ ಅಪಾಯ ಇನ್ನಷ್ಟು ಹೆಚ್ಚುತ್ತದೆ. ಇದರಿಂದ ಕರಾವಳಿ ಪರಿಸರ ವ್ಯವಸ್ಥೆಗಳು ಹಾನಿಗೊಳಗಾಗುತ್ತವೆ. ಜನರ ಜೀವನ, ಜೀವನೋಪಾಯ ಮತ್ತು ಕರಾವಳಿ ಪರಿಸರ ವ್ಯವಸ್ಥೆಯಿಂದ ದೊರೆಯುವ ವಿವಿಧ ಪ್ರಯೋಜನಗಳ ಮೇಲೂ ಪರಿಣಾಮ ಬೀರುತ್ತದೆ.

ಸಮುದ್ರದ ಉಪ್ಪುನೀರು ಒಳನಾಡಿನತ್ತ ಹರಿದುಬಂದರೆ, ಸಿಹಿನೀರಿನ ಬಾವಿಗಳು ಮತ್ತು ಕೃಷಿ ಭೂಮಿಗೆ ಉಪ್ಪು ಸೇರುವ ಸಾಧ್ಯತೆ ಇದೆ. ಚಂಡಮಾರುತದ ವೇಳೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದರೆ ನದಿಗಳು, ಮೇಲ್ಮೈ ನೀರು ಮತ್ತು ಅಂತರ್ಜಲ ಕಲುಷಿತಗೊಳ್ಳಬಹುದು. ಈ ನೀರು ದೀರ್ಘಕಾಲದವರೆಗೆ ಬಳಕೆಗೆ ಯೋಗ್ಯವಾಗದ ಸಾಧ್ಯತೆಯೂ ಇದೆ.

ಇದರಿಂದ ಕುಡಿಯುವ ನೀರಿನ ಸುರಕ್ಷತೆ, ಕೃಷಿ ಉತ್ಪಾದನೆ, ನೀರಾವರಿ ವ್ಯವಸ್ಥೆ ಮತ್ತು ಅಂತರ್ಜಲವನ್ನು ಅವಲಂಬಿಸಿರುವ ಪರಿಸರ ವ್ಯವಸ್ಥೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

►ದುರ್ಬಲ ವಲಯಗಳ ಮೇಲೆ ಹೆಚ್ಚು ಪರಿಣಾಮ

ಸಮುದ್ರ ಮಟ್ಟ ಏರಿಕೆಯನ್ನು ಎದುರಿಸಲು ಸರ್ಕಾರಗಳು ಸಮಗ್ರ ನೀತಿಯನ್ನು ರೂಪಿಸಬೇಕು ಎಂದು ವರದಿ ಹೇಳಿದೆ.

ನದಿ ಜಲಾನಯನ ಪ್ರದೇಶಗಳು, ಸಿಹಿನೀರಿನ ವ್ಯವಸ್ಥೆಗಳು, ಕರಾವಳಿ ಮತ್ತು ಸಾಗರ ಪ್ರದೇಶಗಳನ್ನು ಭೂಬಳಕೆ ಹಾಗೂ ನಿಯಂತ್ರಣ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪರಿಗಣಿಸಲಾಗುತ್ತಿಲ್ಲ. ಇದರಿಂದ ದುರ್ಬಲ ಸಮುದಾಯಗಳು ಮತ್ತು ಕೆಲವು ವಲಯಗಳು ಹೆಚ್ಚು ಹಾನಿಗೊಳಗಾಗುತ್ತಿವೆ.

ಸಣ್ಣ ಪ್ರಮಾಣದ ಮೀನುಗಾರರು, ಸಣ್ಣ ಪ್ರಮಾಣದ ಪ್ರವಾಸೋದ್ಯಮ ಹಾಗೂ ಬಂದರುಗಳನ್ನು ಅವಲಂಬಿಸಿರುವ ಸ್ಥಳೀಯ ಆರ್ಥಿಕತೆಗಳು ಇದರಲ್ಲಿ ಪ್ರಮುಖವಾಗಿವೆ.

►2024ರಲ್ಲಿ ದಾಖಲೆಯ ಏರಿಕೆ

ಸಮುದ್ರ ಮಟ್ಟ ಏರಿಕೆಗೆ ಎರಡು ಪ್ರಮುಖ ಕಾರಣಗಳಿವೆ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮನದಿಗಳು ಕರಗುತ್ತಿವೆ. ಜತೆಗೆ ಸಾಗರಗಳು ಬಿಸಿಯಾಗುತ್ತಿರುವುದರಿಂದ ನೀರು ಉಷ್ಣವಾಗಿ ವಿಸ್ತರಿಸುತ್ತಿದೆ. ಇವೆರಡೂ ಸಮುದ್ರ ಮಟ್ಟ ಏರಿಕೆಗೆ ಕಾರಣವಾಗುತ್ತಿವೆ.

2014ರಿಂದ 2023ರವರೆಗೆ ಜಾಗತಿಕ ಸರಾಸರಿ ಸಮುದ್ರ ಮಟ್ಟವು ವರ್ಷಕ್ಕೆ 4.7 ಮಿ.ಮೀ. ಏರಿತ್ತು. 2024ರಲ್ಲಿ ಒಂದೇ ವರ್ಷದಲ್ಲಿ 5.9 ಮಿ.ಮೀ. ಏರಿಕೆಯಾಗಿದ್ದು, ಇದು ಹೊಸ ದಾಖಲೆಯಾಗಿದೆ.

2024ರಲ್ಲಿ ಸಮುದ್ರ ಮಟ್ಟ ಏರಿಕೆಗೆ ಕಾರಣವಾದ ಸಾಗರದ ತಾಪಮಾನ ಏರಿಕೆಯ ವೇಗವು ಕೆಲವು ಪ್ರದೇಶಗಳಲ್ಲಿ ಕಳೆದ 4,000 ವರ್ಷಗಳಲ್ಲಿ ಕಂಡುಬಂದಿರದಷ್ಟು ಹೆಚ್ಚಿತ್ತು ಎಂದು ವರದಿ ಹೇಳಿದೆ

ಹವಾಮಾನ ವ್ಯವಸ್ಥೆಯಲ್ಲಿ ಈಗಾಗಲೇ ಉಂಟಾಗಿರುವ ತಾಪಮಾನ ಏರಿಕೆಯ ಪರಿಣಾಮದಿಂದಾಗಿ ಸಮುದ್ರ ಮಟ್ಟ ಏರಿಕೆಯ ವೇಗವು 2050ರವರೆಗೂ ಹೆಚ್ಚಾಗುವ ಸಾಧ್ಯತೆ ಇದೆ.

2012ರಿಂದ 2025ರವರೆಗೆ ಸಮುದ್ರ ಮಟ್ಟ ಏರಿಕೆಯ ವಾರ್ಷಿಕ ಸರಾಸರಿ ದರ 4.75 ಮಿ.ಮೀ. ಆಗಿತ್ತು. 2023–24ರಲ್ಲಿ ಎಲ್ ನಿನೊದಿಂದಾಗಿ ಸಾಗರಗಳ ಉಷ್ಣತೆ ಅಸಾಧಾರಣವಾಗಿ ಹೆಚ್ಚಿದ್ದರಿಂದ ಸಮುದ್ರ ಮಟ್ಟ ಸುಮಾರು 5 ಮಿ.ಮೀ. ಏರಿತ್ತು. 2025ರ ಜಾಗತಿಕ ಸರಾಸರಿ ಸಮುದ್ರ ಮಟ್ಟವು 2024ರಲ್ಲಿ ದಾಖಲಾಗಿದ್ದ ಗರಿಷ್ಠ ಮಟ್ಟದಲ್ಲೇ ಮುಂದುವರಿದಿತ್ತು ಎಂದು ವರದಿ ತಿಳಿಸಿದೆ.

►77 ಕೋಟಿ ಜನರು ಅಪಾಯದಲ್ಲಿ

ಎಲ್ ನಿನೊ ಅವಧಿಯಲ್ಲಿ ಸಾಗರದ ಉಷ್ಣತೆ ಅಸಾಧಾರಣವಾಗಿ ಹೆಚ್ಚಿದ್ದರೂ, ಸಮುದ್ರ ಮಟ್ಟ ಏರಿಕೆಯ ಸಮಸ್ಯೆ ಅದಕ್ಕೆ ಮಾತ್ರ ಸೀಮಿತವಾಗಿಲ್ಲ. ಹೆಚ್ಚುತ್ತಿರುವ ಸಮುದ್ರ ಮಟ್ಟವು ಜನರು ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳಗಳ ಮೇಲೆ ಈಗಾಗಲೇ ಪರಿಣಾಮ ಬೀರುತ್ತಿದೆ.

ವಿಶ್ವದ ಸುಮಾರು 77 ಕೋಟಿ ಜನರು, ಅಂದರೆ ಜಾಗತಿಕ ಜನಸಂಖ್ಯೆಯ ಸುಮಾರು ಶೇ 10ರಷ್ಟು ಮಂದಿ, ಅತಿ ಹೆಚ್ಚು ಉಬ್ಬರವಿಳಿತದ ಮಟ್ಟಕ್ಕಿಂತ 5 ಮೀಟರ್ ಗಿಂತ ಕಡಿಮೆ ಎತ್ತರದಲ್ಲಿರುವ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಅವರು ಸಮುದ್ರ ಮಟ್ಟ ಏರಿಕೆಯಿಂದ ತೀವ್ರ ಅಪಾಯಕ್ಕೆ ಒಳಗಾಗಿದ್ದಾರೆ.

ಎಲ್ಲ ಕರಾವಳಿ ಪ್ರದೇಶಗಳಲ್ಲೂ ಸಮುದ್ರ ಮಟ್ಟ ಏರಿಕೆಯಿಂದ ಪ್ರವಾಹ, ಸಿಹಿನೀರಿನಲ್ಲಿ ಉಪ್ಪಿನ ಅಂಶ ಹೆಚ್ಚಳ, ಕರಾವಳಿ ಸವೆತ ಮತ್ತು ಪರಿಸರ ವ್ಯವಸ್ಥೆಯ ಹಾನಿಯಂತಹ ಸಮಸ್ಯೆಗಳು ಮತ್ತಷ್ಟು ತೀವ್ರಗೊಳ್ಳುತ್ತಿವೆ.

ಇದರ ಪರಿಣಾಮವಾಗಿ ಜನರ ಸುರಕ್ಷತೆ, ಜೀವನೋಪಾಯ, ಆರ್ಥಿಕತೆ, ಸಂಸ್ಕೃತಿ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪ್ರಮುಖ ಮೂಲಸೌಕರ್ಯ, ಕೃಷಿ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆ ಅಪಾಯದಲ್ಲಿವೆ. ಹೀಗಾಗಿ ಸಮುದ್ರ ಮಟ್ಟ ಏರಿಕೆ ಸುಸ್ಥಿರ ಅಭಿವೃದ್ಧಿಗೆ ದೊಡ್ಡ ಸವಾಲಾಗಿದೆ ಎಂದು ವರದಿ ಹೇಳಿದೆ.

►‘ಬೆದರಿಕೆ ಹೆಚ್ಚಿಸುವ ಅಂಶ’

ಸಮುದ್ರ ಮಟ್ಟ ಏರಿಕೆಯಿಂದ ಈಗಾಗಲೇ ಇರುವ ಪ್ರವಾಹ ಮತ್ತು ಕರಾವಳಿ ಸವೆತದಂತಹ ಸಮಸ್ಯೆಗಳು ಮತ್ತಷ್ಟು ತೀವ್ರವಾಗಬಹುದು. ಪ್ರಮುಖ ರಸ್ತೆ, ಕಟ್ಟಡ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಬಹುದು. ಕೆಲವು ಪ್ರದೇಶಗಳಲ್ಲಿ ಜನರು ಮನೆಗಳನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಳ್ಳಬೇಕಾಗಬಹುದು. ಪರಿಸ್ಥಿತಿ ತೀವ್ರವಾದರೆ, ದೇಶದ ಕೆಲವು ಕರಾವಳಿ ಪ್ರದೇಶಗಳು ಶಾಶ್ವತವಾಗಿ ಸಮುದ್ರದಲ್ಲಿ ಮುಳುಗುವ ಸಾಧ್ಯತೆಯೂ ಇದೆ.

ಕರಗುತ್ತಿರುವ ಹಿಮನದಿಗಳು ಮತ್ತು ಸಾಗರಗಳ ಉಷ್ಣತೆಯಿಂದ ಸಮುದ್ರ ಮಟ್ಟ ಅಸಾಧಾರಣ ವೇಗದಲ್ಲಿ ಏರುತ್ತಿದೆ. ಇದರಿಂದ ತಗ್ಗು ಪ್ರದೇಶಗಳು, ಕರಾವಳಿ ನಗರಗಳು ಮತ್ತು ಸಮುದಾಯಗಳು, ಉಷ್ಣವಲಯದ ಡೆಲ್ಟಾಗಳು ಹಾಗೂ ಆರ್ಕ್ಟಿಕ್ ಪ್ರದೇಶಗಳು ಹೆಚ್ಚು ಅಪಾಯಕ್ಕೆ ಒಳಗಾಗುತ್ತಿವೆ ಎಂದು ವರದಿ ತಿಳಿಸಿದೆ.

ಸಮುದ್ರ ಮಟ್ಟ ಏರಿಕೆಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಅದರ ಪರಿಣಾಮಗಳು ನಿಧಾನವಾಗಿ ಕಾಣಿಸಿಕೊಳ್ಳುವುದರಿಂದ ಮುಂಚಿತವಾಗಿಯೇ ಕ್ರಮ ಕೈಗೊಳ್ಳುವುದು, ಮುನ್ನೆಚ್ಚರಿಕೆ ವ್ಯವಸ್ಥೆ ರೂಪಿಸುವುದು ಮತ್ತು ದೀರ್ಘಕಾಲೀನ ಯೋಜನೆಗಳನ್ನು ಸಿದ್ಧಪಡಿಸುವುದು ಅಗತ್ಯ ಎಂದು ವರದಿ ಹೇಳಿದೆ.

ಇದಕ್ಕಾಗಿ ಸಾಕಷ್ಟು ಮತ್ತು ನಿರಂತರ ಹಣಕಾಸು ನೆರವು, ಉತ್ತಮ ದತ್ತಾಂಶ ಹಾಗೂ ವೈಜ್ಞಾನಿಕ ಸಾಮರ್ಥ್ಯ ಅಗತ್ಯ. ಜತೆಗೆ ಸಮುದ್ರ ಮಟ್ಟ ಏರಿಕೆಯಿಂದ ಹೆಚ್ಚು ಅಪಾಯದಲ್ಲಿರುವ ಜನರು ಮತ್ತು ರಾಜ್ಯಗಳಿಗೆ ನೆರವಾಗಲು ಬಲವಾದ ತಾಂತ್ರಿಕ, ಸಾಂಸ್ಥಿಕ ಹಾಗೂ ಕಾನೂನು ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor