Photo Credit : AP

ವಾಷಿಂಗ್ಟನ್, ಸೆ. 1: ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕವು ಇರಾನ್ ನಲ್ಲಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೆಲೆಗಳ ಮೇಲೆ ದಾಳಿ ಆರಂಭಿಸಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ‘ಎಕ್ಸ್’ನಲ್ಲಿ ಈ ವಿಷಯವನ್ನು ತಿಳಿಸಿದೆ.

‘ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ (ಅಮೆರಿಕದ ಪೂರ್ವ ಕಾಲಮಾನ) ಅಮೆರಿಕದ ಪಡೆಗಳು ಇರಾನ್ ನಲ್ಲಿರುವ IRGC ನೆಲೆಗಳ ಮೇಲೆ ದಾಳಿ ಆರಂಭಿಸಿವೆ’ ಎಂದು CENTCOM ಹೇಳಿದೆ.

ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಲು ಮತ್ತು ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸಲು IRGC ಇತ್ತೀಚೆಗೆ ನಡೆಸಿದ ಪ್ರಯತ್ನಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಅದು ತಿಳಿಸಿದೆ.

►ಇರಾನ್ ನಲ್ಲಿ ನಾಲ್ಕು ಸ್ಫೋಟ

ಅಮೆರಿಕದ ದಾಳಿ ಆರಂಭವಾಗಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಹಾರ್ಮುಝ್ ಜಲಸಂಧಿಯ ಪೂರ್ವ ಭಾಗದಲ್ಲಿರುವ ಇರಾನ್ ನ ಚಬಹಾರ್ ಮತ್ತು ಕೊನಾರಕ್ ಕೌಂಟಿಗಳ ವ್ಯಾಪ್ತಿಯಲ್ಲಿ ನಾಲ್ಕು ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಪ್ರಾಂತೀಯ ಅಧಿಕಾರಿ ಅಲಿ ಖಲೀಲಾಬಾದಿ ಅವರನ್ನು ಉಲ್ಲೇಖಿಸಿರುವ ಇರಾನ್ ನ ಅಧಿಕೃತ IRNA ಸುದ್ದಿ ಸಂಸ್ಥೆ, ಈ ಪ್ರದೇಶಗಳಲ್ಲಿ ನಾಲ್ಕು ಸ್ಫೋಟಗಳು ಸಂಭವಿಸಿವೆ ಎಂದು ತಿಳಿಸಿದೆ. ಆದರೆ, ಸ್ಫೋಟಗಳಿಂದ ಹಾನಿ ಅಥವಾ ಸಾವು–ನೋವು ಸಂಭವಿಸಿದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

►ರವಿವಾರವೂ ಅಮೆರಿಕದ ದಾಳಿ

ಇದಕ್ಕೂ ಮುನ್ನ ರವಿವಾರ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿತ್ತು. ಹಲವು ವಾರಗಳ ಬಳಿಕ ಇರಾನ್ ವಿರುದ್ಧ ಅಮೆರಿಕ ನಡೆಸಿದ ಮೊದಲ ದಾಳಿ ಇದಾಗಿತ್ತು.

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಮತ್ತಷ್ಟು ಸಮುದ್ರಗಣಿಗಳನ್ನು ಇರಿಸುವುದನ್ನು ತಡೆಯುವ ಉದ್ದೇಶದಿಂದ ಲಾರಕ್ ದ್ವೀಪದಲ್ಲಿರುವ ಇರಾನ್ ನ ರಾಕೆಟ್ ಉಡಾವಣಾ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕ ಹೇಳಿತ್ತು.

ಅಮೆರಿಕದ ಈ ದಾಳಿಗೆ ಪ್ರತಿಯಾಗಿ ಇರಾನ್ ಜೋರ್ಡಾನ್ ನಲ್ಲಿರುವ ಅಮೆರಿಕದ ಸೇನಾ ನೆಲೆಗಳತ್ತ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅವುಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ ಎಂದು ಅಮೆರಿಕ ಹೇಳಿತ್ತು.

ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ತನ್ನ ಜಲಪ್ರದೇಶದ ಮೇಲೆ ಇರಾನ್ ನ ಡ್ರೋನ್ವೊಂದನ್ನು ತಡೆಹಿಡಿದಿರುವುದಾಗಿ ತಿಳಿಸಿತ್ತು.

►ಹಾರ್ಮುಝ್ ಜಲಸಂಧಿ ಬಂದ್

ಆರು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದ ನಡುವೆ ಹಾರ್ಮುಝ್ ಜಲಸಂಧಿ ಬಂದ್ ಆಗಿಯೇ ಉಳಿದಿದೆ. ಇರಾನ್ ನ ಬಂದರುಗಳ ವಿರುದ್ಧ ಅಮೆರಿಕ ನಡೆಸುತ್ತಿರುವ ನೌಕಾ ದಿಗ್ಬಂಧನವೂ ಮುಂದುವರಿದಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಬಾಂಬ್ ದಾಳಿಯಿಂದ ಇರಾನ್ ‘ವಿಫಲ ರಾಷ್ಟ್ರ’ವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಇರಾನ್ ನ ನಾಯಕತ್ವ ನಾಶವಾಗಿದೆ, ಅದರ ಸೇನಾ ಸಾಮರ್ಥ್ಯ ಧ್ವಂಸಗೊಂಡಿದೆ ಮತ್ತು ಆರ್ಥಿಕತೆ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ವಿರುದ್ಧ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿಲ್ಲ.

‘ನಾವು ಅವರನ್ನು ಹೊಡೆಯುವುದಿಲ್ಲ ಎಂದರ್ಥವಲ್ಲ. ಏನಾಗುತ್ತದೆ ಎಂಬುದನ್ನು ನೋಡೋಣ’ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

►‘ಆರ್ಥಿಕ ಡಿ-ಡೇ’ ಯೋಜನೆ

ಇರಾನ್ ವಿರುದ್ಧ ಸೇನಾ ಕ್ರಮದ ಜತೆಗೆ ಆರ್ಥಿಕ ಒತ್ತಡವನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಟ್ರಂಪ್ ಆಡಳಿತ ಕಳೆದ ತಿಂಗಳು ನಿರ್ಬಂಧಗಳ ಮೇಲೆ ಗಮನಹರಿಸಿತ್ತು.

ಸುಮಾರು ಐದು ದಶಕಗಳಿಂದ ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನ್ ವಿರುದ್ಧ ‘ಆರ್ಥಿಕ ಡಿ-ಡೇ’ ನಡೆಸುವುದಾಗಿ ಟ್ರಂಪ್ ಹೇಳಿದ್ದರು.

ಇರಾನ್ನ ಪ್ರಮುಖ ಆರ್ಥಿಕ ಕ್ಷೇತ್ರಗಳ ಮೇಲೆ ನಿರ್ಬಂಧಗಳನ್ನು ಹೇರಿದರೆ, ಆ ದೇಶವು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಲಿದೆ ಎಂದು ಟ್ರಂಪ್ ಆಡಳಿತ ವಾದಿಸಿತ್ತು. ಆದರೆ, ಈ ಸಂಘರ್ಷದ ನಡುವೆ ಅಮೆರಿಕದ ಸುಧಾರಿತ ಶಸ್ತ್ರಾಸ್ತ್ರಗಳ ದಾಸ್ತಾನು ಕಡಿಮೆಯಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಇರಾನ್ ವಿರುದ್ಧದ ಯುದ್ಧವು ಅಮೆರಿಕದ ಜನರಲ್ಲಿ ಜನಪ್ರಿಯವಾಗಿಲ್ಲ ಎಂಬ ಅಭಿಪ್ರಾಯವೂ ಇದೆ.

ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಈ ಯುದ್ಧವು ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ ಉಂಟುಮಾಡಬಹುದು ಎಂಬ ಆತಂಕವೂ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor