×
Ad

ಭಾರತವನ್ನು ಹೊರಗಿಟ್ಟು ದಕ್ಷಿಣ ಏಶ್ಯಾ ಬಣ ಸ್ಥಾಪನೆಗೆ ಪಾಕ್ ಪ್ರಯತ್ನ: ವರದಿ

ದಕ್ಷಿಣ ಏಶ್ಯಾ ಭೌಗೋಳಿಕ ರಾಜಕೀಯದಲ್ಲಿ ಭಾರತದ ಪ್ರಾಬಲ್ಯ ತಗ್ಗಿಸುವ ಉದ್ದೇಶ

Update: 2025-12-10 22:01 IST

Photo Credit ; NDTV 

ಇಸ್ಲಾಮಾಬಾದ್, ಡಿ.10: ದಕ್ಷಿಣ ಏಶ್ಯಾದ ಭೌಗೋಳಿಕ ರಾಜಕೀಯದಲ್ಲಿ ಭಾರತದ ದೀರ್ಘಕಾಲದ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿಟ್ಟಿನಲ್ಲಿ ಭಾರತವನ್ನು ಹೊರಗಿರಿಸಿ ಹೊಸ ದಕ್ಷಿಣ ಏಶ್ಯಾ ಬಣವನ್ನು ಸ್ಥಾಪಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿರುವುದಾಗಿ ರಾಜಕೀಯ ವಿಶ್ಲೇಷಕರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

ಪಾಕಿಸ್ತಾನವು ಬಾಂಗ್ಲಾದೇಶ ಮತ್ತು ಚೀನಾದೊಂದಿಗಿನ ತನ್ನ ತ್ರಿಪಕ್ಷೀಯ ಉಪಕ್ರಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ಇತರ ಪ್ರಾದೇಶಿಕ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಇತ್ತೀಚೆಗೆ ಹೇಳಿದ್ದಾರೆ. ಆದರೆ ಭಾರತದ ಆರ್ಥಿಕತೆ ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿನ ಸಾಧನೆಯನ್ನು ಗಮನಿಸಿದರೆ ಭಾರತ ಇಲ್ಲದ ಪ್ರಾದೇಶಿಕ ಗುಂಪನ್ನು ಸೇರಿಕೊಳ್ಳುವ ಅಪಾಯಕ್ಕೆ ಯಾವುದೇ ದೇಶ ಮುಂದಾಗದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದೀರ್ಘಕಾಲದಿಂದ ನಿಷ್ಕ್ರಿಯವಾಗಿರುವ `ದಕ್ಷಿಣ ಏಶ್ಯಾ ಪ್ರಾದೇಶಿಕ ಸಹಕಾರ ಸಂಘದ(ಸಾರ್ಕ್) ಸ್ಥಾನದಲ್ಲಿ ಹೊಸ ಪ್ರಾದೇಶಿಕ ಒಕ್ಕೂಟವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಇಶಾಕ್ ದಾರ್ ಕಳೆದ ವಾರ ಮುಂದಿರಿಸಿದ್ದರು. ದಕ್ಷಿಣ ಏಶ್ಯಾವು ಇನ್ನು ಮುಂದೆ `ಶೂನ್ಯ ಮೊತ್ತದ ಮನಸ್ಥಿತಿಗಳು, ರಾಜಕೀಯ ವಿಘಟನೆ ಮತ್ತು ನಿಷ್ಕ್ರಿಯ ಪ್ರಾದೇಶಿಕ ವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಸಾಧ್ಯವಿಲ್ಲ. ನಾವು ಮುಕ್ತ ಮತ್ತು ಅಂತರ್ಗತ ಪ್ರಾದೇಶಿಕತೆಯನ್ನು ಬಯಸುತ್ತೇವೆ' ಎಂದು ದಾರ್ ಪ್ರತಿಪಾದಿಸಿದ್ದರು. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಚೀನಾ ಸಾಮಾನ್ಯ ಆಸಕ್ತಿಯ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗವನ್ನು ಬೆಳೆಸಲು ತ್ರಿಪಕ್ಷೀಯ ಕಾರ್ಯವಿಧಾನವನ್ನು ಸ್ಥಾಪಿಸಿದ್ದು, ಜೂನ್‍ನಲ್ಲಿ ಇದರ ಮೊದಲ ಸಭೆ ಚೀನಾದಲ್ಲಿ ನಡೆದಿದೆ.

ಸಾರ್ಕ್‍ ನ ಹೊರಗೆ ರಚನೆಯಾಗುವ ಬಹುರಾಷ್ಟ್ರೀಯ ವೇದಿಕೆಗೆ ಪಾಕಿಸ್ತಾನದ ಬೆಂಬಲವಿದೆ. ನಮ್ಮ ಕಲ್ಪನೆಯ ದಕ್ಷಿಣ ಏಶ್ಯಾದಲ್ಲಿ ವಿಭಜನೆಯ ಬದಲಿಗೆ ಸಹಕಾರ ಮನೋಭಾವ ಇರುತ್ತದೆ. ಸಂಯೋಜಿತ ಆರ್ಥಿಕ ಬೆಳವಣಿಗೆ, ಅಂತರಾಷ್ಟ್ರೀಯ ನ್ಯಾಯ ಸಮ್ಮತತೆಗೆ ಅನುಗುಣವಾಗಿ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲಾಗುತ್ತದೆ ಮತ್ತು ಶಾಂತಿಯನ್ನು ಘನತೆ, ಗೌರವದಿಂದ ನಿರ್ವಹಿಸಲಾಗುತ್ತದೆ. ಈ ಪರಿಕಲ್ಪನೆಯನ್ನು ವಿಸ್ತರಿಸಬಹುದು ಮತ್ತು ಪುನರಾವರ್ತಿಸಬಹುದು. ಯಾವುದೇ ದೇಶವು ಮತ್ತೊಬ್ಬರ ಬಿಗಿಹಿಡಿತದಡಿ ಸಿಲುಕಬಾರದು' ಎಂದು ಭಾರತವನ್ನು ಪರೋಕ್ಷವಾಗಿ ಉಲ್ಲೇಖಿಸಿ ಇಶಾಕ್ ದಾರ್ ಹೇಳಿದ್ದಾರೆ.

*ನಿಷ್ಕ್ರಿಯಗೊಂಡಿರುವ `ಸಾರ್ಕ್'

1985ರಲ್ಲಿ ಬಾಂಗ್ಲಾದ ಢಾಕಾದಲ್ಲಿ ನಡೆದ ಶೃಂಗಸಭೆಯಲ್ಲಿ ದಕ್ಷಿಣ ಏಶ್ಯಾದ ಪ್ರಮುಖ ಪ್ರಾದೇಶಿಕ ಗುಂಪನ್ನು ರಚಿಸಲಾಗಿದ್ದು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್ ಮತ್ತು ಶ್ರೀಲಂಕಾ ಸದಸ್ಯರಾಗಿವೆ.

2007ರಲ್ಲಿ ಅಫ್ಘಾನಿಸ್ತಾನವೂ ಸಾರ್ಕ್‍ಗೆ ಸೇರ್ಪಡೆಗೊಂಡಿದೆ. ಸಾರ್ಕ್‍ನ ಕಡೆಯ ಶೃಂಗಸಭೆ 2014ರಲ್ಲಿ ನಡೆದಿದ್ದು 2016ರಲ್ಲಿ ಇಸ್ಲಮಾಬಾದ್‍ನಲ್ಲಿ ನಿಗದಿಯಾಗಿತ್ತು. ಆದರೆ 2016ರ ಸೆಪ್ಟಂಬರ್‍ ನಲ್ಲಿ ಜಮ್ಮು-ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಬೆಂಬಲ ನೀಡಿದೆ ಎಂದು ಭಾರತ ಪ್ರತಿಪಾದಿಸಿದ ಬಳಿಕ ಇಸ್ಲಾಮಾಬಾದ್ ಶೃಂಗಸಭೆ ರದ್ದಾಗಿದ್ದು ಕ್ರಮೇಣ ಸಾರ್ಕ್ ನಿಷ್ಕ್ರಿಯವಾಗಿದೆ.

ಈ ಮಧ್ಯೆ, ಭಾರತವು ಬಿಮ್‍ಸ್ಟೆಕ್ (ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉಪಕ್ರಮ)ದತ್ತ ಗಮನ ನೀಡಿತ್ತು. ಪಾಕಿಸ್ತಾನವನ್ನು ಹೊರಗಿರಿಸಿರುವ ಈ ಗುಂಪಿನಲ್ಲಿ ಭಾರತ, ಬಾಂಗ್ಲಾ, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News