Photo Credit : X 

ಯಾಂಗಾನ್: ಮಧ್ಯ ಮ್ಯಾನ್ಮಾರ್‌ನ ಬಂಡುಕೋರರ ನಿಯಂತ್ರಣದಲ್ಲಿರುವ ಗ್ರಾಮವೊಂದರ ಶಾಲೆ ಮತ್ತು ಧಾರ್ಮಿಕ ಕೇಂದ್ರದ ಆವರಣದ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂದು ಹಸುಗೂಸು ಹಾಗೂ ಹಲವಾರು ಶಾಲಾ ಮಕ್ಕಳು ಸೇರಿದಂತೆ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ` ರಾಯ್ಟರ್ಸ್' ವರದಿ ಮಾಡಿದೆ.

ಮಾಗ್ವೇ ಪ್ರದೇಶದ ಸಿನ್‍ಬಾಂಗ್‍ವೆ ಟೌನ್‍ಶಿಪ್‍ನಲ್ಲಿ ಧಾರ್ಮಿಕ ಸಮಾರಂಭ ನಡೆಯುತ್ತಿದ್ದಾಗ ಈ ವೈಮಾನಿಕ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಫಿರಂಗಿ ದಾಳಿಗಳೂ ನಡೆದಿದ್ದು, ಸೇನೆಯು ನಾಲ್ಕು 500-ಪೌಂಡ್ ತೂಕದ ವೈಮಾನಿಕ ಬಾಂಬ್‍ಗಳು, 12 ಫಿರಂಗಿ ಶೆಲ್‍ಗಳು ಮತ್ತು ಏಳು ಆತ್ಮಾಹುತಿ ಡ್ರೋನ್‍ಗಳನ್ನು ಬಳಸಿದೆ ಎಂದು ವಿರೋಧ ಪಕ್ಷದ ಅಧಿಕಾರಿಗಳು ಆರೋಪಿಸಿರುವುದಾಗಿ ವರದಿ ತಿಳಿಸಿದೆ. ದಾಳಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ನಾಗರಿಕರು ಹಾಗೂ 9 ಬಂಡುಕೋರ ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬಂಡುಕೋರ ಪಡೆಗಳ ಪದವಿ ಪ್ರದಾನ ಸಮಾರಂಭ ಮತ್ತು ಸಭೆಯನ್ನು ಗುರಿಯಾಗಿಸಿಕೊಂಡು ಈ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಸೇನಾ ಪರ ಟೆಲಿಗ್ರಾಮ್ ಚಾನೆಲ್‍ಗಳು ಪ್ರತಿಪಾದಿಸಿವೆ. ಆದರೆ, ಮ್ಯಾನ್ಮಾರ್ ಸೇನೆಯು ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor