ಸನಾದಲ್ಲಿ ಸೌದಿ ವೈಮಾನಿಕ ದಾಳಿ: ವಿದ್ಯುತ್ ಸ್ಥಾವರದಲ್ಲಿ ಬೆಂಕಿ; ಯಮನ್ ಕರಾವಳಿಯಲ್ಲಿ ಹಡಗು ಅಪಹರಣ
Photo Credit : AP
ಸನಾ: ಯಮನ್ ರಾಜಧಾನಿ ಸನಾದ ಅಬು ಶಮ್ಲಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 15 ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಕನಿಷ್ಠ ಎಂಟು ಮನೆಗಳು ಮತ್ತು ಮೂರು ಅಂಗಡಿಗಳಿಗೆ ಹಾನಿಯಾಗಿದ್ದು, ಗ್ಯಾಸ್ ಸ್ಟೇಷನ್ಗೂ ಸಹ ದಾಳಿಯಾಗಿದೆ ಎಂದು ಹೂತಿಗಳ ಸ್ವಾಮ್ಯದ `ಅಲ್ ಮಸೀರಾ' ಸುದ್ದಿವಾಹಿನಿ ವರದಿ ಮಾಡಿದೆ.
ಮೋಖಾದಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ದಾಳಿಗಳಿಂದ ಬೆಂಕಿ ಹೊತ್ತಿಕೊಂಡಿದೆ ಎಂದೂ ವರದಿ ತಿಳಿಸಿದೆ. ಯಮನ್ನ ಆರಕ್ಕೂ ಹೆಚ್ಚು ಪ್ರಾಂತಗಳಲ್ಲಿ ಸೌದಿ ಅರೇಬಿಯಾ ಶುಕ್ರವಾರ ರಾತ್ರಿಯಿಂದ ಹಲವು ವೈಮಾನಿಕ ದಾಳಿಗಳನ್ನು ನಡೆಸಿದೆ. ಒಂದು ದಾಳಿಯು ಸನಾದ ತಹ್ರೀರ್ ಜಿಲ್ಲೆಯ ಗ್ಯಾಸ್ ಸ್ಟೇಷನ್ಗೆ ಅಪ್ಪಳಿಸಿದ್ದು, ಸಮೀಪದ ಮನೆಗಳು ಮತ್ತು ಅಂಗಡಿಗಳಿಗೆ ಹಾನಿಯಾಗಿದೆ. ಮತ್ತೊಂದು ದಾಳಿಯು ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡಿದ್ದು, ಪತಿ ಮತ್ತು ಪತ್ನಿ ಮೃತಪಟ್ಟಿದ್ದಾರೆ. ಮೂರನೇ ದಾಳಿಯು ರಾಜಧಾನಿಯ ಹೊರವಲಯದಲ್ಲಿರುವ ಬನಿ ಮತಾರ್ ಜಿಲ್ಲೆಯ ಗ್ಯಾಸ್ ಸ್ಟೇಷನ್ ಮೇಲೆ ನಡೆದಿದೆ ಎಂದು ಹೂತಿ ಮೂಲಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
ಕೆಂಪು ಸಮುದ್ರದ ಕರಾವಳಿ ನಗರವಾದ ಮೊಕಾದಲ್ಲಿರುವ ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ಐದು ವೈಮಾನಿಕ ದಾಳಿಗಳು ನಡೆದಿದ್ದು, ಅಂಗಡಿಗಳು ಮತ್ತು ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ಕಳೆದ ಮೂರು ತಿಂಗಳಿನಿಂದ ಘರ್ಷಣೆಗಳು ನಡೆಯುತ್ತಿರುವ ತೈಜ್ನಲ್ಲಿಯೂ ಮತ್ತೊಂದು ದಾಳಿ ನಡೆದಿರುವುದು ವರದಿಯಾಗಿದೆ. ಹೂತಿ ನಿಯಂತ್ರಣದಲ್ಲಿರುವ ಹಲವು ಪ್ರಾಂತಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಈ ದಾಳಿಗಳಿಗೆ ಸೌದಿ ಅರೇಬಿಯಾವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೂತಿ ವಕ್ತಾರ ಯಾಹ್ಯಾ ಸಾರೀ ಹೇಳಿದ್ದಾರೆ.
ರಾಜಧಾನಿ ಸನಾದ ಅಲ್-ತಹ್ರೀರ್ ಜಿಲ್ಲೆಯಲ್ಲಿ ಸೌದಿ ನಡೆಸಿದ ದಾಳಿಯಿಂದ ಎಂಟು ಮನೆಗಳು ಮತ್ತು ಮೂರು ಅಂಗಡಿಗಳಿಗೆ ಹಾನಿಯಾಗಿದ್ದು, ಅಲ್-ಬೇಡಾ ಪ್ರಾಂತದ ದೂರಸಂಪರ್ಕ ಜಾಲಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಯಮನ್ ಕರಾವಳಿಯಲ್ಲಿ ಹಡಗು ಅಪಹರಣ
ಯಮನ್ನ ಬಲ್ಹಾಫ್ನಿಂದ ನೈಋತ್ಯಕ್ಕೆ 64 ನಾಟಿಕಲ್ ಮೈಲುಗಳ ದೂರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಸರಕು ಹಡಗನ್ನು ಹತ್ತಿ ನೌಕೆಯ ನಿಯಂತ್ರಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಡಗಿನ ಕ್ಯಾಪ್ಟನ್ನನ್ನು ಉಲ್ಲೇಖಿಸಿ ಯುನೈಟೆಡ್ ಕಿಂಗ್ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ಸಂಸ್ಥೆಯು ಶನಿವಾರ ತಿಳಿಸಿದೆ.
ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಆ ಪ್ರದೇಶದಲ್ಲಿರುವ ಇತರ ಹಡಗುಗಳು ಎಚ್ಚರಿಕೆಯಿಂದ ಮುಂದುವರಿಯುವಂತೆ ಯುಕೆಎಂಟಿಒ ಸಲಹೆ ನೀಡಿದೆ. ಯುರೋಪಿಯನ್ ಯೂನಿಯನ್ ನೌಕಾಪಡೆಯ ಮಿಷನ್ ಕೂಡ ಶನಿವಾರ ಆ ಪ್ರದೇಶದಲ್ಲಿ ಕಡಲ್ಗಳ್ಳತನದ ಘಟನೆಯೊಂದನ್ನು ವರದಿ ಮಾಡಿದೆ.
ಹೂತಿ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತ್ಯು
ತೈಜ್ ನಗರದ ವಾಯುವ್ಯ ಗಡಿಯನ್ನು ಗುರಿಯಾಗಿಸಿಕೊಂಡು ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
ಪೂರ್ವ ಗಡಿಯಲ್ಲಿ ಯಮನ್ ಸರಕಾರಿ ಪಡೆಗಳು ಹೂತಿಗಳ ಡ್ರೋನ್ ಒಂದನ್ನು ಹೊಡೆದುರುಳಿಸಿವೆ ಎಂದು ವರದಿ ತಿಳಿಸಿದೆ. ಈ ಮಧ್ಯೆ, ದಕ್ಷಿಣ ಸೌದಿ ಅರೇಬಿಯಾದ ಕಡೆಗೆ ಹೂತಿಗಳು ಹಾರಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸೌದಿ ನೇತೃತ್ವದ ಮೈತ್ರಿಕೂಟದ ವಾಯು ರಕ್ಷಣಾ ಪಡೆಗಳು ತಡೆದು ನಾಶಪಡಿಸಿವೆ ಎಂದು ಮೈತ್ರಿಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಲಿಕಿ ತಿಳಿಸಿದ್ದಾರೆ.