×
Ad

ಗಾಝಾದಲ್ಲಿ ಶಾಶ್ವತ ಯುದ್ಧ ವಿರಾಮಕ್ಕೆ ಆಗ್ರಹಿಸಿ ವಿಶ್ವದಾದ್ಯಂತ ಜಾಥಾ

Update: 2023-11-26 21:06 IST

ಸಾಂದರ್ಭಿಕ ಚಿತ್ರ Photo: X/AJEnglish

ಲಂಡನ್, ನ.26: ಗಾಝಾದಲ್ಲಿ ಶಾಶ್ವತ ಕದನ ವಿರಾಮಕ್ಕೆ ಆಗ್ರಹಿಸಿ ಮತ್ತು ಫೆಲೆಸ್ತೀನ್ ಜನತೆಗೆ ಬೆಂಬಲ ಸೂಚಿಸಿ ವಿಶ್ವದಾದ್ಯಂತ ವ್ಯಾಪಕ ಜಾಥಾ, ಪ್ರತಿಭಟನೆ, ಪ್ರದರ್ಶನ ನಡೆದಿರುವುದಾಗಿ ವರದಿಯಾಗಿದೆ.

ಲಂಡನ್‍ನಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಫೆಲೆಸ್ತೀನ್ ಪರ ಘೋಷಣೆ ಕೂಗಿದರು ಮತ್ತು ಗಾಝಾದಲ್ಲಿ ಶುಕ್ರವಾರ ಜಾರಿಗೆ ಬಂದಿರುವ 4 ದಿನಗಳ ಕದನ ವಿರಾಮ ಶಾಶ್ವತವಾಗಿ ಅನುಷ್ಟಾನಗೊಳ್ಳಬೇಕು ಎಂದು ಆಗ್ರಹಿಸಿದರು. ಜಾಥಾದಲ್ಲಿ ನಾಝಿಗಳ ಸಂಕೇತವಿದ್ದ ಬ್ಯಾನರ್ ಪ್ರದರ್ಶಿಸಿದ ಆರೋಪದಲ್ಲಿ ಪೊಲೀಸರು ಕನಿಷ್ಟ 18 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಕಾನೂನನ್ನು ಉಲ್ಲಂಘಿಸದಂತೆ ಎಚ್ಚರಿಕೆ ನೀಡುವ ಕರಪತ್ರಗಳನ್ನು ಹಂಚುತ್ತಿದ್ದ ಪೊಲೀಸರು ಪ್ರತಿಭಟನಾ ಜಾಥಾ ಆರಂಭಗೊಳ್ಳುವ ಪ್ರದೇಶದಲ್ಲಿ ಜನಾಂಗೀಯ ದ್ವೇಷವನ್ನು ಪ್ರಚೋದಿಸುತ್ತಿದ್ದ ಶಂಕೆಯ ಮೇಲೆ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಗಾಝಾದಲ್ಲಿ ಶಾಶ್ವತ ಕದನವಿರಾಮಕ್ಕೆ ಆಗ್ರಹಿಸಿ ಇಂಡೊನೇಶ್ಯಾದ ರಾಜಧಾನಿ ಜಕಾರ್ತದಲ್ಲಿ ರವಿವಾರ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಬಿಳಿಬಟ್ಟೆ, ಸಾಂಪ್ರದಾಯಿಕ ಫೆಲೆಸ್ತೀನಿಯನ್ ಸ್ಕಾರ್ಫ್ ಧರಿಸಿ ಪಾಲ್ಗೊಂಡಿದ್ದು ಕರಾವಂಗ್, ಪಶ್ಚಿಮ ಜಾವ ರಸ್ತೆಯಲ್ಲಿ ಜಾಥಾ ನಡೆಸಿದರು. `ಫೆಲೆಸ್ತೀನ್‍ನಲ್ಲಿ ಶಾಶ್ವತ ಕದನ ವಿರಾಮ ಜಾರಿಗೊಳ್ಳಬೇಕು ಮತ್ತು ಅಗತ್ಯವಿರುವ ಜನರಿಗೆ ನಿರ್ಣಾಯಕ ಮಾನವೀಯ ನೆರವನ್ನು ತಕ್ಷಣ ಒದಗಿಸಬೇಕು. ಗಾಝಾದಲ್ಲಿರುವ ಈಗಿನ ಪರಿಸ್ಥಿತಿ ಇಸ್ರೇಲಿ ಹಿಂಸಾಚಾರದ ಉತ್ಪನ್ನವಾಗಿದ್ದು ಅದು ಜಗತ್ತಿನಾದ್ಯಂತದ ಜನರ ಮನಸ್ಸನ್ನು ನೋಯಿಸಿದೆ. ಗಾಝಾ ಹಿಂಸಾಚಾರ ಅಂತ್ಯಕ್ಕೆ ಅಂತಾರಾಷ್ಟ್ರೀಯ ಸಮುದಾಯ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಜಾಥಾದಲ್ಲಿ ಆಗ್ರಹಿಸಲಾಯಿತು.

ಕೆನಡಾದ ಸಂಸತ್ ಭವನದ ಎದುರು ರವಿವಾರ ನಡೆದ ಪ್ರತಿಭಟನೆಯಲ್ಲಿ ಫೆಲೆಸ್ತೀನಿಯನ್, ಅರಬ್, ಮುಸ್ಲಿಂ, ಯೆಹೂದಿ ಸಮುದಾಯದವರು, ಯುದ್ಧವಿರೋಧಿ ಸಂಘಟನೆ, ಕಾರ್ಮಿಕ ಸಂಘಟನೆ, ಸಾಮಾಜಿಕ ನ್ಯಾಯ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದು ಗಾಝಾದಲ್ಲಿ ಶಾಶ್ವತ ಕದನವಿರಾಮಕ್ಕೆ ಒತ್ತಾಯಿಸಿದರು.

ಜಪಾನ್ ರಾಜಧಾನಿ ಟೋಕಿಯೊ ಬಳಿಯ ಶಿಬುಯಾ ಜಿಲ್ಲೆಯಲ್ಲಿ ನಡೆದ ಜಾಥಾದಲ್ಲಿ ಗಾಝಾ ಸಂಘರ್ಷದಲ್ಲಿ ಮೃತಪಟ್ಟ ಸುಮಾರು 15,000 ಫೆಲೆಸ್ತೀನೀಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೆಲದ ಮೇಲೆ ಹಾಸಿದ್ದ ರಟ್ಟಿನ ಫಲಕದ ಮೇಲೆ ಕೆಂಪು ಕಣ್ಣೀರ ಹನಿಗಳನ್ನು ಚಿತ್ರಿಸಿದರು. `ಇಸ್ರೇಲ್‍ನ ವರ್ಣಭೇದ ನೀತಿ ಮತ್ತು ಫೆಲೆಸ್ತೀನೀಯರನ್ನು ನಿರ್ನಾಮ ಮಾಡುವ ನರಮೇಧ ಖಂಡನೀಯ' ಎಂದು ಘೋಷಣೆ ಕೂಗಿದರು. ಫಿಲಿಪ್ಪೀನ್ಸ್, ಬಾಂಗ್ಲಾದೇಶದಲ್ಲೂ ಬೃಹತ್ ಜಾಥಾ ನಡೆಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News