×
Ad

ಮೂವರು ಸಂಶೋಧಕರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ

Update: 2025-10-13 16:42 IST

Image Credit: X

ಹೊಸದಿಲ್ಲಿ,ಅ.13: 2025ನೇ ಸಾಲಿಗಾಗಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನವೀನತೆ ಮತ್ತು ಆರ್ಥಿಕ ಬೆಳವಣಿಗೆ ಕುರಿತು ಪರಿವರ್ತನಾಶೀಲ ಕೆಲಸಕ್ಕಾಗಿ ಜೋಯೆಲ್ ಮೊಕಿರ್,ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಅವರಿಗೆ ನೀಡಲಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸೋಮವಾರ ಪ್ರಶಸ್ತಿಯನ್ನು ಘೋಷಿಸಿದ್ದು,ಇದು ಈ ವರ್ಷದ ನೊಬೆಲ್ ಋತುವಿನ ಅಂತಿಮ ಪ್ರಶಸ್ತಿಯಾಗಿದೆ.

‘ನವೀನತೆ-ಚಾಲಿತ ಆರ್ಥಿಕ ಬೆಳವಣಿಗೆಯನ್ನು ವಿವರಿಸಿದ್ದಕ್ಕಾಗಿ’ ಈ ಮೂವರು ಅರ್ಥಶಾಸ್ತ್ರಜ್ಞರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಸಮಿತಿಯು ತಿಳಿಸಿದೆ.

ತಾಂತ್ರಿಕ ಪ್ರಗತಿಯ ಮೂಲಕ ಸುಸ್ಥಿರ ಬೆಳವಣಿಗೆಗಾಗಿ ಪೂರ್ವಾಪೇಕ್ಷಿತಗಳನ್ನು ಗುರುತಿಸಿದ್ದಕ್ಕಾಗಿ ಪ್ರಶಸ್ತಿ ಮೊತ್ತದ ಅರ್ಧವನ್ನು ಅಮೆರಿಕದ ನಾರ್ಥ್‌ವೆಸ್ಟರ್ನ್ ವಿವಿಯಲ್ಲಿ ಡಚ್-ಇಸ್ರೇಲ್-ಅಮೆರಿಕ ಆರ್ಥಿಕ ಇತಿಹಾಸಕಾರ ಮೊಕಿರ್‌ಗೆ ನೀಡಲಾಗಿದ್ದರೆ,ರಚನಾತ್ಮಕ ವಿನಾಶದ ಮೂಲಕ ಸುಸ್ಥಿರ ಬೆಳವಣಿಗೆಯ ಸಿದ್ಧಾಂತಕ್ಕಾಗಿ ಪ್ಯಾರಿಸ್‌ನ ಕಾಲೇಜ್ ಡಿ ಫ್ರಾನ್ಸ್‌ನ ಪ್ರೊಫೆಸರ್ ಅಘಿಯಾನ್ ಮತ್ತು ಅಮೆರಿಕದ ಬ್ರೌನ್ ವಿವಿಯ ಪ್ರೊಫೆಸರ್ ಹೊವಿಟ್ ಉಳಿದ ಅರ್ಧ ಮೊತ್ತವನ್ನು ಹಂಚಿಕೊಂಡಿದ್ದಾರೆ.

ಮೊಕಿರ್ ಸಮಾಜಗಳು ನಿಶ್ಚಲತೆಯಿಂದ ಸ್ವಾವಲಂಬಿ ಆರ್ಥಿಕ ಬೆಳವಣಿಗೆಗೆ ಹೇಗೆ ಪರಿವರ್ತನೆಗೊಂಡವು ಎನ್ನುವುದನ್ನು ತಿಳಿದುಕೊಳ್ಳಲು ಐತಿಹಾಸಿಕ ಪುರಾವೆಗಳನ್ನು ಬಳಸಿದ್ದರು. ಜ್ಞಾನ,ಪ್ರಯೋಗ ಮತ್ತು ಬದಲಾವಣೆಗೆ ಮುಕ್ತತೆಯನ್ನು ಮೌಲ್ಯೀಕರಿಸುವ ಸಂಸ್ಕೃತಿಯು ನವೀನತೆಗಳನ್ನು ಬೆಂಬಲಿಸಿದಾಗ ಮಾತ್ರ ತಾಂತ್ರಿಕ ಪ್ರಗತಿಯು ನಿರಂತರವಾಗಿರುತ್ತದೆ ಎನ್ನುವುದನ್ನು ಅವರ ಸಂಶೋಧನೆಯು ತೋರಿಸಿದೆ.

‘ರಚನಾತ್ಮಕ ವಿನಾಶದ’ ಪ್ರಭಾವಶಾಲಿ ಸಿದ್ಧಾಂತವನ್ನು ಅಭಿವೃದ್ಧಿಗೊಳಿಸಿದ್ದಕ್ಕಾಗಿ ಅಘಿಯಾನ್ ಮತ್ತು ಬ್ರೌನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರ 1992ರ ಪ್ರಬಂಧವು ಹೊಸ ಆವಿಷ್ಕಾರಗಳು ಹಳೆಯ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಬದಲಿಸುವ ಆವರ್ತನದ ಮೂಲಕ ಆರ್ಥಿಕ ಬೆಳವಣಿಗೆ ಹೇಗೆ ಸಂಭವಿಸುತ್ತದೆ ಎನ್ನುವುದನ್ನು ತೋರಿಸುವ ಮಾದರಿಯನ್ನು ಪ್ರಸ್ತುತಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News