×
Ad

ಭಾರತೀಯ ಪ್ರವಾಸಿಗರು 15 ದಿನಗಳ ಕಾಲ ವೀಸಾರಹಿತವಾಗಿ ಇರಾನ್ ಸಂದರ್ಶಿಸಲು ಅವಕಾಶ

Update: 2024-02-07 23:59 IST

Photo credit: moneycontrol.com

ಟೆಹರಾನ್: ಭಾರತೀಯ ಪ್ರವಾಸಿಗರು ವೀಸಾ ರಹಿತವಾಗಿ 15 ದಿನಗಳವರೆಗೆ ಇರಾನ್ ದೇಶವನ್ನು ಸಂದರ್ಶಿಸಬಹುದಾಗಿದೆ ಎಂದು ಭಾರತದಲ್ಲಿರುವ ಇರಾನಿ ರಾಯಭಾರಿ ಕಚೇರಿ ಬುಧವಾರ ತಿಳಿಸಿದೆ. ನೂತನ ಆದೇಶದ ಪ್ರಕಾರ, ಭಾರತೀಯ ಪೌರರು ಪ್ರತಿ ಆರು ತಿಂಗಳಿಗೊಮ್ಮೆ ಸಾಮಾನ್ಯ ಪಾಸ್ಪೋರ್ಟ್ ನೊಂದಿಗೆ ಇರಾನ್ ಅನ್ನು ಪ್ರವೇಶಿಸಬಹುದಾಗಿದ್ದು,ಅವರು ಗರಿಷ್ಠ 15 ದಿನಗಳ ಕಾಲ ವಾಸ್ತವ್ಯ ಹೂಡಬಹುದಾಗಿದೆ.

ಕೇವಲ ಪ್ರವಾಸದ ಉದ್ದೇಶದಿಂದ ದೇಶಕ್ಕೆ ಆಗಮಿಸುವ ಭಾರತೀಯರಿಗೆ ಮಾತ್ರವೇ ಈ ವೀಸಾ ರಹಿತ ನೀತಿಯು ಅನ್ವಯವಾಗಲಿದೆ ಎಂದು ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವೇಳೆ ಭಾರತೀಯ ಪೌರರು ದೀರ್ಘ ಅವಧಿಗೆ ಉಳಿದುಕೊಳ್ಳಬೇಕೆಂದಿದ್ದಲ್ಲಿ ಅಥವಾ ಆರು ತಿಂಗಳೊಳಗೆ ಹಲವು ಸಲ ದೇಶವನ್ನು ಪ್ರವೇಶಿಸಬೇಕಿದ್ದಲ್ಲಿ ಅವರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ ಇರಾನ್ ನಲ್ಲಿ ಅಧಿಕೃತ ಪ್ರಾತಿನಿಧಿಕ ಸಂಸ್ಥೆಗಳ ಮೂಲಕ ವೀಸಾಗಳನ್ನು ಪಡೆಯಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ.

ವಿಮಾನಮಾರ್ಗವಾಗಿ ದೇಶವನ್ನು ಪ್ರವೇಶಿಸುವ ಭಾರತೀಯ ಪ್ರಜೆಗಳಿಗೆ ಮಾತ್ರವೇ ನೂತನ ನೀತಿ ಅನ್ವಯವಾಗುತ್ತದೆ ಎಂದು ಅದು ಹೇಳಿದೆ.

ಇದರೊಂದಿಗೆ ಕಳೆದ ಕೆಲವು ತಿಂಗಳುಗಳಲ್ಲಿ ಭಾರತೀಯ ಪ್ರವಾಸಿಗರಿಗೆ ವೀಸಾರಹಿತ ಭೇಟಿಯ ಸೌಲಭ್ಯವನ್ನು ಘೋಷಿಸಿದ ಸಾಲಿಗೆ ಇದೀಗ ಇರಾನ್ ಕೂಡಾ ಸೇರಿದಂತಾಗಿದೆ. 2023ರ ಡಿಸೆಂಬರ್ 1ರಿಂದ ಮಲೇಶ್ಯವು ಭಾರತೀಯರಿಗೆ 30 ದಿನಗಳ ವೀಸಾ ರಹಿತ ಪ್ರವೇಶದ ಸೌಲಭ್ಯವನ್ನು ಪ್ರಕಟಿಸಿತ್ತು. ಥೈಲ್ಯಾಂಡ್ ಕೂಡಾ ನವೆಂಬರ್ 10ರಿಂದ ಮೊದಲ್ಗೊಂಡು ಭಾರತೀಯರಿಗೆ ಆರು ತಿಂಗಳುಗಳ ಅವಧಿಗೆ ವೀಸಾ ರಹಿತ ಸಂದರ್ಶನದ ಅವಕಾಶವನ್ನು ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News