`ಕೆಂಪು ವಲಯ' ಸಮೀಪಿಸುತ್ತಿರುವ ತೈಲ ಮಾರುಕಟ್ಟೆ: ಐಇಎ ಮುಖ್ಯಸ್ಥರ ಎಚ್ಚರಿಕೆ
ಹಾರ್ಮುಝ್ ತಕ್ಷಣ ತೆರೆಯಲು ಆಗ್ರಹ
ಫಾತಿಹ್ ಬಿರೋಲ್ | Photo Credit : @fbiro
ಲಂಡನ್, ಮೇ 22: ಇರಾನ್ ಬಿಕ್ಕಟ್ಟು ಮುಂದುವರಿದಿರುವುದರಿಂದ ಮಧ್ಯಪಾಚ್ಯದಿಂದ ತೈಲ ರಫ್ತಿನಲ್ಲಿ ತೀವ್ರ ಕೊರತೆ ಎದುರಾಗುವ ಅಪಾಯವಿದ್ದು ಜುಲೈ ಆಗಸ್ಟ್ ವೇಳೆಗೆ ತೈಲ ಮಾರುಕಟ್ಟೆಗಳು `ಕೆಂಪು ವಲಯ' ಪ್ರವೇಶಿಸಬಹುದು ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ(ಐಇಎ)ಯ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್ ಸಂಚಾರವನ್ನು ಇರಾನ್ ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಇದರಿಂದ ತೈಲ ಮತ್ತು ಅನಿಲ ಸಾಗಣೆಗೆ ಅಡ್ಡಿಯಾಗಿದೆ ಮತ್ತು ಬೆಲೆಗಳು ಗಗನಕ್ಕೇರಿದೆ.
ಹಾರ್ಮುಝ್ ಜಲಸಂಧಿಯನ್ನು ಪೂರ್ಣ ಪ್ರಮಾಣದಲ್ಲಿ ಮತ್ತು ಬೇಷರತ್ತಾಗಿ ಪುನರಾರಂಭಿಸುವುದು ಇರಾನ್ ಯುದ್ಧದ ಇಂಧನ ಆಘಾತಕ್ಕೆ ಅತ್ಯಂತ ಪ್ರಮುಖ ಪರಿಹಾರವಾಗಿದೆ. ಈ ಹಿಂದೆ ಮಾರ್ಚ್‍ನಲ್ಲಿ ಮಾಡಿದಂತೆ, ಕಾರ್ಯತಂತ್ರದ ತೈಲ ದಾಸ್ತಾನನ್ನು ಹೆಚ್ಚಿನ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕು ಐಇಎ ಸದಸ್ಯ ರಾಷ್ಟ್ರಗಳು ಮುಕ್ತವಾಗಿವೆ. ಈ ನಿಟ್ಟಿನಲ್ಲಿ ಸಮನ್ವಯ ಕಾರ್ಯಕ್ಕೆ ಐಇಎ ಸಿದ್ಧವಾಗಿದೆ ಎಂದವರು ಹೇಳಿದ್ದಾರೆ. ಐಎಇಯ 80%ದಷ್ಟು ಸಾಮೂಹಿಕ ಮೀಸಲು ತೈಲಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿಲ್ಲ.
ತೈಲ ಸಂಗ್ರಹ ಕುಸಿಯುತ್ತಿದೆ. ಮಧ್ಯಪ್ರಾಚ್ಯದಿಂದ ಹೊಸ ತೈಲ ಬರುತ್ತಿಲ್ಲ ಮತ್ತು ಬೇಡಿಕೆ ಹೆಚ್ಚುತ್ತಿದೆ. ಸ್ವಲ್ಪ ಮಟ್ಟಿನ ಸುಧಾರಣೆಯಾಗದಿದ್ದರೆ ನಾವು ಜುಲೈ- ಆಗಸ್ಟ್ ವೇಳೆಗೆ ಕೆಂಪು ವಲಯವನ್ನು ಪ್ರವೇಶಿಸಬಹುದು. ಭೌಗೋಳಿಕ ರಾಜಕೀಯದ ಗಾಢ ಮತ್ತು ದೀರ್ಘ ನೆರಳು ಇಂಧನ ಕ್ಷೇತ್ರದಲ್ಲಿ ಪ್ರಬಲವಾಗಿರುವುದನ್ನು ಇದುವರೆಗೆ ನೋಡಿಲ್ಲ. ಯುರೋಪ್‍ನಲ್ಲಿನ ತೀವ್ರವಾದಿ ಪಕ್ಷಗಳು ಮುಂಬರುವ ಹಣದುಬ್ಬರವನ್ನು ಅವಕಾಶವಾದಿಯಾಗಿ ದುರುಪಯೋಗ ಪಡಿಸಿಕೊಳ್ಳುವ ಅಪಾಯವಿದೆ ಎಂದು ಬಿರೊಲ್ ಎಚ್ಚರಿಕೆ ನೀಡಿದ್ದಾರೆ.
ಯುದ್ಧ ವಿರಾಮದ ನಿರೀಕ್ಷೆ ಮೂಡಿಸಿದ ಕರಡು ಒಪ್ಪಂದ : ವರದಿ
ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಶಮನಕ್ಕೆ ರೂಪಿಸಲಾದ ಕರಡು ಒಪ್ಪಂದವು ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನ ಸ್ವಾತಂತ್ರ್ಯದ ಖಾತರಿ ಮತ್ತು ಇರಾನ್‍ಗೆ ಕ್ರಮೇಣ ನಿರ್ಬಂಧಗಳ ಪರಿಹಾರವನ್ನು ಒಳಗೊಂಡಿದೆ ಎಂದು `ಅಲ್ ಹದತ್' ಶುಕ್ರವಾರ ವರದಿ ಮಾಡಿದೆ.
ಪ್ರಸ್ತಾವಿತ ಕರಡು ಒಪ್ಪಂದದಲ್ಲಿ ಒಳಗೊಂಡಿರುವ ಅಂಶಗಳು:
ಎಲ್ಲಾ ರಂಗಗಳಲ್ಲಿ ತಕ್ಷಣದ, ಸಮಗ್ರ ಮತ್ತು ಬೇಷರತ್ತಾದ ಕದನ ವಿರಾಮ.
ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸುವ ಮೂಲಕ ಬಗೆಹರಿಯದ ವಿವಾದದ ಬಗ್ಗೆ ಔಪಚಾರಿಕ ಮಾತುಕತೆಗಳಿಗೆ ಅವಕಾಶ ಕಲ್ಪಿಸುವುದು.
ಮಿಲಿಟರಿ, ನಾಗರಿಕ ಅಥವಾ ಆರ್ಥಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ತಡೆಯಲು ಪರಸ್ಪರ ಬದ್ಧರಾಗಿರುವುದು. (ಇತ್ತೀಚೆಗೆ ತೈಲ ವ್ಯವಸ್ಥೆಗಳು, ಹಡಗು ಮಾರ್ಗಗಳು ಮತ್ತು ಕಾರ್ಯತಂತ್ರದ ವ್ಯವಸ್ಥೆಗಳ ಮೇಲೆ ನಡೆದ ದಾಳಿಗಳು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುವ ಮತ್ತು ಪ್ರಾದೇಶಿಕ ವ್ಯಾಪಾರವನ್ನು ಅಡ್ಡಿಪಡಿಸುವ ಭೀತಿಯ ಹಿನ್ನೆಲೆಯಲ್ಲಿ ಈ ಷರತ್ತು ಮಹತ್ವದ್ದಾಗಿದೆ).
ಎಲ್ಲಾ ಮಿಲಿಟರಿ ಕಾರ್ಯಾಚರಣೆ ಮತ್ತು `ಮಾಧ್ಯಮ ಯುದ್ಧ'ವನ್ನು ಸ್ಥಗಿತಗೊಳಿಸುವುದು.
ಸಾರ್ವಭೌಮತ್ವವನ್ನು ಗೌರವಿಸುವುದು ಮತ್ತು ಹಸ್ತಕ್ಷೇಪ ಮಾಡದಿರುವುದು. ಎರಡೂ ಕಡೆಯವರು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಮತ್ತು ಪರಸ್ಪರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರಲು ಬದ್ಧವಾಗಿರುವುದು.
ಅರೇಬಿಯನ್ ಕೊಲ್ಲಿ, ಹಾರ್ಮುಝ್ ಕೊಲ್ಲಿ ಮತ್ತು ಒಮಾನ್ ಸಮುದ್ರದಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು.
ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ವಿವಾದಗಳನ್ನು ಪರಿಹರಿಸಲು ಜಂಟಿ ಕಾರ್ಯವಿಧಾನದ ಸ್ಥಾಪನೆ.
ಒಪ್ಪಂದ ಜಾರಿಗೆ ಬಂದ ಏಳು ದಿನಗಳಲ್ಲಿ ಬಗೆಹರಿಯದ ಸಮಸ್ಯೆಗಳ ಕುರಿತು ಮಾತುಕತೆ ಪ್ರಾರಂಭಿಸುವುದು.
ಒಪ್ಪಂದದ ಅಂಶಗಳನ್ನು ಇರಾನ್ ಅನುಸರಿಸಿದರೆ ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಕ್ರಮೇಣ ತೆರವುಗೊಳಿಸುವುದು.
ಪ್ರಸ್ತಾವಿತ ಚೌಕಟ್ಟು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆ ಚಾರ್ಟರ್‌ಗೆ ಬದ್ಧತೆಗಳನ್ನು ಒಳಗೊಂಡಿರುತ್ತದೆ.
ಎರಡೂ ಕಡೆಯವರು ಒಪ್ಪಿಕೊಂಡರೆ ಇರಾನ್ ಮತ್ತು ಅಮೆರಿಕದ ಅಧಿಕೃತ ಘೋಷಣೆಯೊಂದಿಗೆ ಒಪ್ಪಂದವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ವರದಿ ಹೇಳಿದೆ.