ನೈಸರ್ಗಿಕ ಅನಿಲ ಆಮದಿಗೆ ಪಾಕ್-ಇರಾನ್ ಪೈಪ್‍ಲೈನ್ ಯೋಜನೆ
Photo : www.iranintl.com
ಇಸ್ಲಾಮಾಬಾದ್: ದೇಶದ ಇಂಧನ ಅಗತ್ಯವನ್ನು ಪೂರೈಸಲು ಇರಾನ್‍ನಿಂದ ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದ್ದು ಇದಕ್ಕಾಗಿ ಇರಾನ್‍ವರೆಗೆ ಪೈಪ್‍ಲೈನ್ ನಿರ್ಮಿಸುವ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.
ಇರಾನ್ ಗಡಿಭಾಗದಿಂದ ಪಾಕಿಸ್ತಾನದ ಬಂದರು ನಗರ ಗ್ವದರ್‍ವರೆಗೆ 800 ಕಿ.ಮೀ ಪೈಪ್‍ಲೈನ್ ಯೋಜನೆಯ ಆರಂಭಿಕ ಹಂತದ 80 ಕಿ.ಮೀ ಉದ್ದದ ಪೈಪ್‍ಲೈನ್ ನಿರ್ಮಾಣ ಕಾಮಗಾರಿಗೆ ಪಾಕಿಸ್ತಾನದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸರಕಾರದ ನಿಧಿ ಬಳಸಿ ನಿರ್ಮಾಣವಾಗಲಿರುವ ಈ ಯೋಜನೆ, ಉಭಯ ದೇಶಗಳ ನಡುವೆ 2013ರಲ್ಲಿ ಸಹಿಹಾಕಲಾದ 25 ವರ್ಷಗಳ ಅನಿಲ ಯೋಜನೆಯ ಭಾಗವಾಗಿದೆ. ಆದರೆ ಇರಾನ್ ವಿರುದ್ಧ ವಿಶ್ವಸಂಸ್ಥೆ ನಿರ್ಬಂಧ ಜಾರಿಗೊಳಿಸಿದ್ದರಿಂದ ಹಾಗೂ ಡಾಲರ್ ವ್ಯವಹಾರದ ಬಗ್ಗೆ ಇರುವ ನಿರ್ಬಂಧದಿಂದಾಗಿ ಯೋಜನೆಯಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಅಮೆರಿಕದ ಜತೆ ಪಾಕಿಸ್ತಾನ ನಿಕಟ ಸಂಪರ್ಕ ಹೊಂದಿದೆ. ಇರಾನ್ ಜತೆಗಿನ ಅಮೆರಿಕದ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು ಈ ಯೋಜನೆಯು ಪಾಶ್ಚಿಮಾತ್ಯರ ಕಣ್ಣು ಕೆಂಪಾಗಿಸಬಹುದು. ಪಾಕಿಸ್ತಾನದಲ್ಲಿ ನೈಸರ್ಗಿಕ ಅನಿಲ ಸಂಪನ್ಮೂಲ ವೇಗವಾಗಿ ಖಾಲಿ ಆಗುತ್ತಿರುವುದರಿಂದ ಆಮದು ಮಾಡಿಕೊಳ್ಳುವ ಅಗತ್ಯವಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.