×
Ad

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ರಫೇಲ್ ವಿಮಾನದ ನಷ್ಟವಾಗಿದೆ ಎಂಬ ಪಾಕಿಸ್ತಾನದ ವಾದ ನಿಖರವಲ್ಲ: ಡಸಾಲ್ಟ್ ಮುಖ್ಯಸ್ಥರ ಸ್ಪಷ್ಟನೆ

Update: 2025-06-15 15:58 IST

PC | INDIA TODAY

ಪ್ಯಾರಿಸ್: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ವಾದವನ್ನು ಡಸಾಲ್ಟ್ ಏವಿಯೇಷನ್‌ ಸಿಇಒ ಎರಿಕ್ ಟ್ರಾಪಿಯರ್ ತಳ್ಳಿ ಹಾಕಿದ್ದಾರೆ.

ಈ ಮೂಲಕ, ಈ ಕುರಿತು ಇದೇ ಪ್ರಥಮ ಬಾರಿಗೆ ಬಾಹ್ಯಾಕಾಶ ದೈತ್ಯ ಸಂಸ್ಥೆಯಾದ ಡಸಾಲ್ಡ್ ಏವಿಯೇಷನ್‌ ಸಾರ್ವಜನಿಕ ಸ್ಪಷ್ಟನೆ ನೀಡಿದೆ.

'Challenges' ಫ್ರೆಂಚ್ ನಿಯತಕಾಲಿಕಕ್ಕೆ ಸಂದರ್ಶನ ನೀಡಿರುವ ಎರಿಕ್ ಟ್ರಾಪಿಯರ್, "ಮೇ ತಿಂಗಳ ಆರಂಭದಲ್ಲಿ ನಡೆದಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ರಫೇಲ್ ಯುದ್ಧ ವಿಮಾನಗಳ ನಷ್ಟವುಂಟಾಗಿದೆ ಎಂದು ಭಾರತದ ಕಡೆಯಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಪ್ರತಿಪಾದನೆ ನಿಖರವಲ್ಲ ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದ್ದಾರೆ.

"ಈ ಕುರಿತು ನಮಗೆ ಭಾರತ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ನಿಖರವಾಗಿ ಏನಾಗಿದೆ ಎಂಬುದು ನಮಗೆ ತಿಳಿದಿಲ್ಲ. ನಮಗೆ ತಿಳಿದಿರುವುದೇನೆಂದರೆ, ಮೂರು ರಫೇಲ್ ಯುದ್ಧ ವಿಮಾನಗಳನ್ನು ನಾಶಗೊಳಿಸಲಾಗಿದೆ ಎಂಬ ಪಾಕಿಸ್ತಾನದ ಪ್ರತಿಪಾದನೆ ನಿಖರವಲ್ಲ ಎಂಬುದು ಮಾತ್ರ" ಎಂದು ಪ್ಯಾರಿಸ್ ಏರ್ ಶೋ ಪ್ರಾರಂಭಕ್ಕೂ ಮುನ್ನ, ಎರಿಕ್ ಟ್ರಾಪಿಯರ್ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.

ಇದೇ ವೇಳೆ, ಆಧುನಿಕ ಯುದ್ಧ ಕಾರ್ಯಾಚರಣೆಗಳನ್ನು ಅಂತಹ ಕಾರ್ಯಾಚರಣೆಗಳು ಯಶಸ್ವಿಯಾಗಿವೆಯೇ ಎಂಬ ಆಧಾರದಲ್ಲಿ ಅಳೆಯಬೇಕೇ ಹೊರತು, ಅಂತಹ ಕಾರ್ಯಾಚರಣೆಗಳ ವೇಳೆ ಸಂಭವಿಸುವ ನಷ್ಟಗಳನ್ನು ಆಧರಿಸಿಯಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.

2020ರಲ್ಲಿ ಭಾರತೀಯ ವಾಯು ಪಡೆಗೆ ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾದಾಗಿನಿಂದ, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ರಫೇಲ್ ಯುದ್ಧ ವಿಮಾನಗಳ ನೇತೃತ್ವದಲ್ಲಿ ನಡೆದ ಪ್ರಪ್ರಥಮ ಬಹು ಮುಖ್ಯ ಸೇನಾ ಕಾರ್ಯಾಚರಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News