Philippines: ಹಡಗು ಮುಳುಗಿ 15 ಮೃತ್ಯು; 28 ಮಂದಿ ನಾಪತ್ತೆ
Update: 2026-01-26 21:13 IST
Photo Credit : NDTV
ಮನಿಲಾ, ಜ.26: ದಕ್ಷಿಣ ಫಿಲಿಪ್ಪೀನ್ಸ್‌ನ ಬಾಲುಕ್ ದ್ವೀಪದ ಬಳಿ ಸೋಮವಾರ ಪ್ರಯಾಣಿಕರ ಹಡಗು ಮುಳುಗಿ, ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 28 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಜಂಬೋವಂಗ ನಗರದಿಂದ ಸುಲು ಪ್ರಾಂತದ ಜೊಲೊ ನಗರಕ್ಕೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ 332 ಪ್ರಯಾಣಿಕರು ಮತ್ತು 27 ಸಿಬ್ಬಂದಿ ಇದ್ದರು. ಸ್ಥಳೀಯ ಕಾಲಮಾನ ಸೋಮವಾರ ಮಧ್ಯಾಹ್ನ 1:50ಕ್ಕೆ ಹಡಗಿನೊಳಗೆ ಏಕಾಏಕಿ ನೀರು ಪ್ರವೇಶಿಸಿ ಹಡಗು ಮುಳುಗತೊಡಗಿತು. ಹಡಗಿನ ಕ್ಯಾಪ್ಟನ್ ಅಪಾಯದ ಸಂದೇಶ ರವಾನಿಸಿದ್ದು, ಫಿಲಿಪ್ಪೀನ್ಸ್‌ನ ಕರಾವಳಿ ಕಾವಲು ಪಡೆ, ನೌಕಾಪಡೆ, ವಾಯುಪಡೆ ಹಾಗೂ ಸ್ಥಳೀಯ ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. 316 ಮಂದಿಯನ್ನು ರಕ್ಷಿಸಲಾಗಿದ್ದು, 15 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇನ್ನೂ 28 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.