ಎಲ್ಲವನ್ನೂ ಪರಿಶೀಲಿಸುತ್ತೇವೆ: ಮಿನ್ನಿಯಾಪೋಲಿಸ್ ಗುಂಡಿನ ದಾಳಿ ಬಳಿಕ ಟ್ರಂಪ್ ಹೇಳಿಕೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಜ.26: ಶನಿವಾರ ಮಿನ್ನಿಯಾಪೋಲಿಸ್‌ನಲ್ಲಿ ವಲಸೆ ಅಧಿಕಾರಿಗಳ ಗುಂಡಿನ ದಾಳಿಯಲ್ಲಿ 37 ವರ್ಷದ ನರ್ಸ್ ಅಲೆಕ್ಸ್ ಪ್ರೆಟ್ಟಿ ಸಾವನ್ನಪ್ಪಿದ ಬಳಿಕ, ತನ್ನ ಆಡಳಿತವು ‘ಎಲ್ಲವನ್ನೂ ಪರಿಶೀಲಿಸುತ್ತಿದೆ’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಘಟನೆಯ ಸಂದರ್ಭದಲ್ಲಿ ಅಧಿಕಾರಿಯ ನಡೆ ಸರಿಯೇ ಎಂಬ ಪ್ರಶ್ನೆಗೆ ಟ್ರಂಪ್, ‘ನಾವು ಪರಿಶೀಲಿಸುತ್ತೇವೆ. ನಾವು ಎಲ್ಲವನ್ನೂ ಪರಿಶೀಲಿಸುತ್ತೇವೆ ಮತ್ತು ಒಂದು ನಿರ್ಣಯಕ್ಕೆ ಬರುತ್ತೇವೆ’ ಎಂದು ಉತ್ತರಿಸಿದ್ದಾರೆ. ಅಂತಿಮವಾಗಿ ನಗರದಿಂದ ವಲಸೆ ಅಧಿಕಾರಿಗಳನ್ನು ಹಿಂತೆಗೆದುಕೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ ಕಾಲಮಿತಿ ನೀಡಿಲ್ಲ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ಈ ನಡುವೆ, ರವಿವಾರ ಮಿನ್ನಿಯಾಪೋಲಿಸ್ ಹಾಗೂ ಅಮೆರಿಕಾದ ಇತರ ನಗರಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ಘಟನೆ ಫೆಡರಲ್ ಅಧಿಕಾರಿಗಳು ಹಾಗೂ ರಾಜ್ಯದ ಅಧಿಕಾರಿಗಳ ನಡುವೆ ಹೊಸ ತಿಕ್ಕಾಟಕ್ಕೆ ನಾಂದಿ ಹಾಡಿದೆ. ಟ್ರಂಪ್ ಆಡಳಿತವು ಪ್ರೆಟ್ಟಿಯ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಸಮರ್ಥಿಸಿಕೊಂಡಿದ್ದು, ಪ್ರೆಟ್ಟಿ ಪಿಸ್ತೂಲನ್ನು ಝಳಪಿಸುತ್ತಿದ್ದರಿಂದ ಗುಂಡು ಹಾರಿಸಬೇಕಾಯಿತು ಎಂದು ಪ್ರತಿಪಾದಿಸಿದೆ.
ಸ್ಥಳೀಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಪ್ರೆಟ್ಟಿಯ ಕೈಯಲ್ಲಿದ್ದ ಪಿಸ್ತೂಲ್ ನೋಂದಾಯಿತವಾಗಿತ್ತು ಮತ್ತು ಪಿಸ್ತೂಲನ್ನು ಕಸಿದುಕೊಂಡ ಬಳಿಕವೇ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ಆಡಳಿತಕ್ಕೆ ಕೆಲವು ಪ್ರಮುಖ ರಿಪಬ್ಲಿಕನ್ನರಿಂದಲೂ ಒತ್ತಡ ಎದುರಾಗಿದ್ದು, ವ್ಯಾಪಕ ತನಿಖೆ ನಡೆಸಬೇಕೆಂಬ ಡೆಮಾಕ್ರಟಿಕ್ ಪಕ್ಷದ ಆಗ್ರಹಕ್ಕೆ ಧ್ವನಿ ಸೇರಿಸಿದ್ದಾರೆ.