×
Ad

ಇರಾನ್ ಸಂಘರ್ಷ: ಹಲವು ವಿಮಾನ ರದ್ದುಪಡಿಸಿದ ಇಂಡಿಗೊ, ಪಥ ಬದಲಿಸಿದ ಏರ್‌ ಇಂಡಿಯಾ

Update: 2026-01-26 07:53 IST

 ಸಾಂದರ್ಭಿಕ ಚಿತ್ರ Photo Credit : PTI

ಹೊಸದಿಲ್ಲಿ: ಇರಾನ್‌ನಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ಬಿಲಿಸಿ, ಅಲ್ಮತಿ, ತಾಷ್ಕೆಂಟ್ ಹಾಗೂ ಬಕು ನಗರಗಳಿಗೆ ತೆರಳುವ ವಿಮಾನಗಳ ಸಂಚಾರವನ್ನು ಈ ತಿಂಗಳ 28ರವರೆಗೆ ರದ್ದುಪಡಿಸಿದೆ.

ಇದೇ ವೇಳೆ ಏರ್ ಇಂಡಿಯಾ ವಿಮಾನಗಳು ತಮ್ಮ ಹಾರಾಟದ ಪಥವನ್ನು ಬದಲಿಸಿಕೊಂಡಿದ್ದು, ಉತ್ತರ ಅಮೆರಿಕಕ್ಕೆ ತೆರಳುವ ವಿಮಾನಗಳು ಇರಾನ್‌ನ ವಾಯುಪ್ರದೇಶವನ್ನು ತಪ್ಪಿಸಿ ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿವೆ. ಪೂರ್ವ ಭಾಗದ ಹವಾಮಾನ ಹಾಗೂ ಹಿಮಗಾಳಿ ಪರಿಸ್ಥಿತಿ ಸುಧಾರಿಸುವವರೆಗೆ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

“ಇರಾನ್‌ನಲ್ಲಿ ಹಾಲಿ ಇರುವ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ, ಜನವರಿ 26, 27 ಮತ್ತು 28ರಂದು ಬಿಲಿಸಿ, ಅಲ್ಮತಿ, ತಾಷ್ಕೆಂಟ್ ಹಾಗೂ ಬಕು ನಗರಗಳಿಗೆ ತೆರಳಬೇಕಿದ್ದ ಹಾಗೂ ಅಲ್ಲಿಂದ ಭಾರತಕ್ಕೆ ಆಗಮಿಸಬೇಕಿದ್ದ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ,” ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.

ಯೂರೋಪಿಯನ್ ಯೂನಿಯನ್ ವಿಮಾನಯಾನ ಸುರಕ್ಷಾ ಏಜೆನ್ಸಿಯ (EASA) ಸಲಹೆಯಂತೆ, ಜನವರಿ 16ರಿಂದಲೇ ಏರ್ ಇಂಡಿಯಾ ವಿಮಾನಗಳು ಇರಾನ್ ವಾಯುಪ್ರದೇಶದ ಮೂಲಕ ಹಾರಾಟ ನಡೆಸುವುದನ್ನು ಸ್ಥಗಿತಗೊಳಿಸಿದ್ದವು.

ಹಾಲಿ ಇರುವ ಭದ್ರತಾ ಪರಿಸ್ಥಿತಿ ಹಾಗೂ ಅಮೆರಿಕದ ಮಿಲಿಟರಿ ಕ್ರಮಗಳ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕದ ಸಂಭಾವ್ಯ ದಾಳಿಯ ಆತಂಕದಿಂದ ಇರಾನಿಯ ವಾಯುರಕ್ಷಣಾ ಪಡೆಗಳು ಕಟ್ಟೆಚ್ಚರ ವಹಿಸಿದ್ದು, ಇರಾನಿಯ ವಾಯುಪ್ರದೇಶದಲ್ಲಿ ಹಾರುವ ವಿಮಾನಗಳನ್ನು ತಪ್ಪಾಗಿ ಗುರುತಿಸುವ ಸಾಧ್ಯತೆ ಇರುವುದರಿಂದ ಈ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News