Bangladeshನ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 'ದ್ವೇಷ ಭಾಷಣ' ಕ್ಕೆ ಅವಕಾಶ: ಆಶ್ಚರ್ಯ, ಆಘಾತ ವ್ಯಕ್ತಪಡಿಸಿದ ಢಾಕಾ
ಭಾರತದ ವಿರುದ್ಧ ಬಾಂಗ್ಲಾದೇಶದ ಆಕ್ಷೇಪ
ಶೇಖ್ ಹಸೀನಾ | Photo Credit : PTI
ಢಾಕಾ, ಜ. 25: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹೊಸದಿಲ್ಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಭಾಷಣ ಮಾಡಲು ಅವಕಾಶ ನೀಡಿರುವುದಕ್ಕೆ ಬಾಂಗ್ಲಾದೇಶ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಫೆಬ್ರವರಿ 12ರಂದು ನಡೆಯಲಿರುವ ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ರವಿವಾರ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಈ ಘಟನೆಯ ಕುರಿತು ಆಶ್ಚರ್ಯ ಮತ್ತು ಆಘಾತ ವ್ಯಕ್ತಪಡಿಸಲಾಗಿದ್ದು, ಹೊಸದಿಲ್ಲಿಯಿಂದ ಹಸೀನಾ ನೀಡಿದ ಭಾಷಣವನ್ನು “ದ್ವೇಷ ಭಾಷಣ” ಎಂದು ಹೇಳಲಾಗಿದೆ. ಭಾರತದ ರಾಜಧಾನಿಯಲ್ಲಿ ಈ ರೀತಿಯ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವುದು ಬಾಂಗ್ಲಾದೇಶದ ಜನರು ಹಾಗೂ ಸರ್ಕಾರಕ್ಕೆ ಅವಮಾನಕರವಾಗಿದೆ ಎಂದು ಹೇಳಲಾಗಿದೆ.
ಈ ಕ್ರಮವು ದ್ವಿಪಕ್ಷೀಯ ಸಂಬಂಧಗಳನ್ನು ಹದಗೆಡಿಸುವ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ. ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಪದೇಪದೆ ಮನವಿ ಮಾಡಿದರೂ ಭಾರತ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನವನ್ನೂ ಬಾಂಗ್ಲಾದೇಶವು ವ್ಯಕ್ತಪಡಿಸಿದೆ.
ಸಾಮೂಹಿಕ ದಂಗೆಯ ಬಳಿಕ 2024ರ ಆಗಸ್ಟ್‌ನಲ್ಲಿ ದೇಶ ತೊರೆದು ಭಾರತಕ್ಕೆ ಬಂದಿದ್ದ 78 ವರ್ಷದ ಹಸೀನಾ, ಶುಕ್ರವಾರ ರಾಷ್ಟ್ರ ರಾಜಧಾನಿಯ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಡಿಯೋ ಭಾಷಣ ಮಾಡಿದರು. ಬಾಂಗ್ಲಾದೇಶ ತೊರೆದ ಬಳಿಕ ಭಾರತದಲ್ಲಿ ಅವರು ನೀಡಿದ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ.
‘ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿ’ ಎಂಬ ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮದಲ್ಲಿ, ಅವರ ಉರುಳಿಸಲ್ಪಟ್ಟ ಸರ್ಕಾರದ ಕೆಲ ಮಾಜಿ ಸಚಿವರು ಹಾಗೂ ವಲಸೆ ಬಾಂಗ್ಲಾದೇಶಿಗರು ಭಾಗವಹಿಸಿದ್ದರು.
ಭಾಷಣದಲ್ಲಿ ಹಸೀನಾ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ವಿರುದ್ಧ ತೀವ್ರ ಟೀಕೆ ನಡೆಸಿದರು. ವಿದೇಶಿ ಶಕ್ತಿಗಳ ಪ್ರಭಾವವಿದೆ ಎಂದು ಆರೋಪಿಸಿದ ಅವರು, ಸಂವಿಧಾನವನ್ನು ರಕ್ಷಿಸಿ ಪುನಃಸ್ಥಾಪಿಸಬೇಕೆಂದು ಕರೆ ನೀಡಿದರು.
ಬಾಂಗ್ಲಾದೇಶ ತನ್ನ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಹಿಂಸಾಚಾರ, ಕಾನೂನುಬಾಹಿರ ಕೃತ್ಯಗಳಿಗೆ ಅಂತ್ಯವಾಗಬೇಕು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಸುರಕ್ಷತೆಗೆ ಭರವಸೆ ನೀಡಬೇಕೆಂದು ಆಗ್ರಹಿಸಿದರು.
ಕಳೆದ ವರ್ಷದ ನವೆಂಬರ್‌ನಲ್ಲಿ ಢಾಕಾ ನ್ಯಾಯಾಲಯವು ಹಸೀನಾ ವಿರುದ್ಧ ಗೈರುಹಾಜರಿಯಲ್ಲಿ ಪ್ರಚೋದನೆ, ಕೊಲೆ ಆದೇಶ ನೀಡಿದ ಆರೋಪ ಮತ್ತು ಹಿಂಸಾಚಾರ ತಡೆಯಲು ವಿಫಲವಾದ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಮುಂದಿನ ಚುನಾವಣೆಗೆ ಮುನ್ನ ಹಸೀನಾ ಅವರ ಪಕ್ಷ ಅವಾಮಿ ಲೀಗ್ ನಿಷೇಧವಾಗಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಹಾಗೂ ಜಮಾತ್–ಇ–ಇಸ್ಲಾಮಿ ಪ್ರಮುಖ ಸ್ಪರ್ಧಿಗಳಾಗಿ ಕಣದಲ್ಲಿವೆ.