×
Ad

ಶ್ವೇತಭವನದ ದೀಪಾವಳಿ ಆಹ್ವಾನ ನಿರಾಕರಿಸಿದ ರೂಪಿ ಕೌರ್

Update: 2023-11-07 21:19 IST

Photo: Rupi Kaur - Twitter

ಯುದ್ಧ ಪೀಡಿತ ಪ್ಯಾಲೆಸ್ತೀನ್ ಬೆಂಬಲಿಸಿರುವ ಪ್ರಸಿದ್ಧ ಕವಯಿತ್ರಿ ರೂಪಿ ಕೌರ್ ಅವರು ಅಮೆರಿಕ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರ ದೀಪಾವಳಿ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಗಾಝಾ ಮೇಲಿನ ದಾಳಿಯಲ್ಲಿಇಸ್ರೇಲ್ ಗೆ ಅಮೆರಿಕ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಕೌರ್ ಆಹ್ವಾನವನ್ನು ತಿರಸ್ಕರಿಸಿದ್ದಾರೆ. “ಅಮೆರಿಕ ಸರ್ಕಾರವು ಗಾಝಾದ ಮೇಲಿನ ಬಾಂಬ್ ದಾಳಿಗೆ ಕೇವಲ ಹಣವನ್ನಷ್ಟೇ ನೀಡುತ್ತಿಲ್ಲ. ಅವರು ನಿರಾಶ್ರಿತ ಶಿಬಿರಗಳು, ಅಲ್ಲಿನ ಆರೋಗ್ಯ ಪರಿಸ್ಥಿತಿ ಲೆಕ್ಕಿಸದೆ ಫೆಲೆಸ್ತೀನಿನ ವಿರುದ್ಧದ ನರಮೇಧವನ್ನು ಸಮರ್ಥಿಸುತ್ತಿದ್ದಾರೆ. ಗಾಝಾವಾಸಿಗಳ ಮೂಲಭೂತ ಸೌಲಭ್ಯಗಳನ್ನು ತಡೆಹಿಡಯಲಾಗಿದೆ. ಅವರ ಪೂಜಾ ಸ್ಥಳಗಳು ಧ್ವಂಸಗೊಂಡಿವೆ” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಕಿಡಿಕಾರಿದ್ದಾರೆ

ಕೌರ್ ಭಾರತ ಮೂಲದ ಕೆನಡಾದ ಕವಯಿತ್ರಿ. ಅವರು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಕವನಗಳು ಖ್ಯಾತಿಗಳಿಸಿವೆ. ಪ್ರಕಟಿತ ಕವನ ಪುಸ್ತಕಗಳನ್ನು ಅವರು ಹೊಂದಿದ್ದಾರೆ. ತನ್ನ ಹೇಳಿಕೆಯಲ್ಲಿ, ಕೌರ್ ಫೆಲೆಸ್ತೀನ್ ಕುರಿತ ಅಮೆರಿಕ ನೀತಿಯು "ದೀಪಾವಳಿಯ ಸ್ಪೂರ್ತಿ" ಯೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.

"ಒಬ್ಬ ಸಿಖ್ ಮಹಿಳೆಯಾಗಿ ನಾಗರಿಕರ ಮೇಲಿನ ಸಾಮೂಹಿಕ ಶಿಕ್ಷೆಯನ್ನು ಬೆಂಬಲಿಸುವ ಸರಕಾರದಿಂದ, ಯಾವುದೇ ಆಹ್ವಾನವನ್ನು ನಾನು ನಿರಾಕರಿಸುತ್ತೇನೆ. ಶಿಕ್ಷೆ ಅನುಭವಿಸುತ್ತಿರುವರಲ್ಲಿ 50 ಶೇ. ಮಕ್ಕಳು!” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೌರ್ ತನ್ನ ಹೇಳಿಕೆಯಲ್ಲಿ, “ಗಾಝಾದಲ್ಲಿ ವಿಶ್ವಸಂಸ್ಥೆಯ ಮಾನವೀಯ ಕದನ ವಿರಾಮದ ಕರೆಯನ್ನು ಅಮೆರಿಕ ತಿರಸ್ಕರಿಸಿದೆ. ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್, ರೆಡ್ಕ್ರಾಸ್ ಮತ್ತು ಹೆಚ್ಚಿನ ದೇಶಗಳು ಕದನ ವಿರಾಮ ಬಯಸುತ್ತಿದೆ. ಗಾಝಾ – ಇಸ್ರೇಲ್ ಬಿಕ್ಕಟ್ಟಿನಿಂದ 10,000 ಕ್ಕೂ ಹೆಚ್ಚು ಫೆಲೆಸ್ತೀನಿಯರ ಹತ್ಯೆಯಾಗಿದೆ. ಸತ್ತವರಲ್ಲಿ 70% ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಇಸ್ರೇಲ್ ಬಿಳಿ ರಂಜಕ ಬಾಂಬ್ಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ, ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳುವ ಪ್ರಕಾರ ಇದು ಯುದ್ಧ ಅಪರಾಧದ ಅಡಿಯಲ್ಲಿ ತನಿಖೆಯಾಗಬೇಕು. ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ತೀನಿಯನ್ನರ ಮನೆಗಳನ್ನು ಇಸ್ರೇಲ್ ಒತ್ತಾಯಪೂರ್ವಕವಾಗಿ ಆಕ್ರಮಿಸಿಕೊಂಡಿರುವ ದೃಶ್ಯಗಳನ್ನು ನಾವು ಸಿಎನ್ಎನ್ನಲ್ಲಿ ನೋಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News