ಅಮೆರಿಕ - ಇರಾನ್ ನಡುವೆ ಮತ್ತೆ ಆರಂಭವಾದ ದಾಳಿ | ಶಾಂತಿ ಸ್ಥಾಪನೆಗೆ ಪೋಪ್ ಲಿಯೋ ಕರೆ
ಪೋಪ್ ಲಿಯೋ | Photo Credit : PTI
ವ್ಯಾಟಿಕನ್: ಅಮೆರಿಕ–ಇರಾನ್ ನಡುವಿನ ದಾಳಿಗಳು ಮತ್ತೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಂಘರ್ಷದ ಬದಲು ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿ ಸ್ಥಾಪಿಸಲು ಪೋಪ್ ಲಿಯೋ ಕರೆ ನೀಡಿದ್ದಾರೆ.
ಅಮೆರಿಕ–ಇರಾನ್ ನಡುವಿನ ಇತ್ತೀಚಿನ ದಾಳಿಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಯುದ್ಧದ ಗಾಳಿ ಮಧ್ಯಪ್ರಾಚ್ಯ, ಉಕ್ರೇನ್ ಹಾಗೂ ಅದರಾಚೆಗೂ ಹಿಂಸೆ, ಭಯೋತ್ಪಾದನೆ ಮತ್ತು ಸಾವನ್ನು ಬಿತ್ತುತ್ತಿದೆ ಎಂದು ವಿಷಾದಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಪೋಪ್ ಲಿಯೋ, "ಸಂವಾದ, ಮುಖಾಮುಖಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಯಲ್ಲಿ ನಾವು ಮುಂದುವರಿಯುತ್ತೇವೆ ಎಂಬ ನನ್ನ ಭರವಸೆಯನ್ನು ಪುನರುಚ್ಚರಿಸುತ್ತೇನೆ" ಎಂದು ಹೇಳಿದ್ದಾರೆ.
"ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುವ ಏಕೈಕ ಮಾರ್ಗ ಇದೇ. ಜನರು ಪರಸ್ಪರ ಹೊಂದಾಣಿಕೆ, ಪರಸ್ಪರ ಭದ್ರತೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಗೆ ಗೌರವ ನೀಡುವ ವಾತಾವರಣದಲ್ಲಿ ಬದುಕಲು ಇದರಿಂದ ಸಾಧ್ಯವಾಗುತ್ತದೆ" ಎಂದೂ ಅವರು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಾಗೂ ಉಕ್ರೇನ್‌ನಲ್ಲಿ ಯುದ್ಧ ಮುಂದುವರಿದಿರುವ ಸಂದರ್ಭದಲ್ಲಿ ಪೋಪ್ ಲಿಯೋ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಸಂಘರ್ಷಗಳಿಗೆ ಶಾಶ್ವತ ಪರಿಹಾರ ಸಂವಾದ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮೂಲಕವೇ ಸಾಧ್ಯ ಎಂಬ ಸಂದೇಶವನ್ನು ಅವರು ಪುನರುಚ್ಚರಿಸಿದ್ದಾರೆ.