×
Ad

ಉಕ್ರೇನ್ ಯುದ್ಧ ಅಂತ್ಯಕ್ಕೆ ರಶ್ಯ-ಅಮೆರಿಕ ನಡುವೆ ಮಾತುಕತೆ ಆರಂಭ

Update: 2025-02-28 22:24 IST
PCC: aljazeera.com

ಮಾಸ್ಕೋ :ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಭಯದೇಶಗಳ ರಾಜತಾಂತ್ರಿಕರನ್ನು ಉಚ್ಚಾಟನೆಯ ಬಳಿಕ ಹದಗೆಟ್ಟಿದ್ದ ರಶ್ಯ- ಅಮೆರಿಕ ಬಾಂಧವ್ಯವನ್ನು ಮರುಸ್ತಾಪಿಸಲು ಇಸ್ತಾಂಬುಲ್‌ ನಲ್ಲಿ ಶುಕ್ರವಾರ ಎರಡನೇ ಸುತ್ತಿ ಮಾತುಕತೆ ಆರಂಭಗೊಂಡಿದೆ. ಆದರೆ ಈ ಮಾತುಕತೆಯಲ್ಲಿ, ಮೂರು ವರ್ಷಗಳ ಯುದ್ಧದಲ್ಲಿ ತಾನು ವಶಪಡಿಸಿಕೊಂಡಿರುವ ಪ್ರಾಂತಗಳ ಬಗ್ಗೆ ತಾನು ಚರ್ಚಿಸುವುದಿಲ್ಲವೆಂದು ರಶ್ಯವು ಶನಿವಾರ ತಿಳಿಸಿದೆ. ಈ ಪ್ರಾಂತಗಳನ್ನು ವಿಭಜಿಸಲು ಸಾಧ್ಯವಿಲ್ಲ ಮತ್ತು ಅದು ದೇಶದ ಸಂವಿಧಾನದ ಭಾಗವಾಗಿದೆ ಎಂದು ರಶ್ಯದ ಅಧ್ಯಕ್ಷೀಯ ವಕ್ತಾರ ಡಿಮಿಟ್ರಿ ಪೆಸ್ಕೊವ್ ತಿಳಿಸಿದ್ದಾರೆ.

ಅಮೆರಿಕ ಹಾಗೂ ರಶ್ಯ ಜೊತೆಗಿನ ಸಂಬಂಧಗಳನ್ನು ಮರುಸ್ಥಾಪಿಸುವ ನಿರ್ಧಾರವು ಇಷ್ಟೊಂದು ಸುಲಭವಾಗಿ ಹಾಗೂ ತ್ವರಿತವಾಗಿ ನಡೆಯುವುದೆಂದು ಯಾರೂ ನಿರೀಕ್ಷಿಸಲಿಲ್ಲವೆಂದು ಹೇಳಿದರು. ಉಭಯ ರಾಷ್ಟ್ರಗಳ ರಾಜಕೀಯ ಇಚ್ಚಾಶಕ್ತಿ ಹಾಗೂ ಪರಸ್ಪರರ ಮಾತುಗಳಿಗೆ ಕಿವಿಗೊಡುವ ಇಚ್ಛೆಯಿಂದಾಗಿ ಇದು ಸಾಧ್ಯವಾಯಿತೆಂದು ಹೇಳಿದರು.

ಉಭಯದೇಶಗಳ ನಡುವೆ ಬಾಂಧವ್ಯವನ್ನು ಮರುಸ್ಥಾಪಿಸುವ ಬಗ್ಗೆ ರಶ್ಯ ಹಾಗೂ ಅಮೆರಿಕದ ರಾಜತಾಂತ್ರಿಕರು ಶುಕ್ರವಾರ ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಅಮೆರಿಕದ ಕಾನ್ಸುಲೇಟ್ ಕಚೇರಿಯಲ್ಲಿ ಮಾತುಕತೆಗಳನ್ನು ಪುನಾರಂಭಿಸಿದ ಬಳಿಕ ಪೆಸ್ಕೊವ್ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೆಲವು ದಿನಗಳ ಹಿಂದೆ ಸೌದಿ ಆರೇಬಿಯದ ರಿಯಾದ್‌ ನಲ್ಲಿ ಮಾತುಕತೆ ನಡೆಸಿದ್ದ ಅಮೆರಿಕ ಹಾಗೂ ರಶ್ಯದ ರಾಜತಾಂತ್ರಿಕರು ಉಭಯದೇಶಗಳಲ್ಲಿ ತಮ್ಮ ರಾಯಭಾರಿ ಕಚೇರಿಗಳನ್ನು ಪುನರಾಂಭಿಸುವ ಬಗ್ಗೆ ಮಾತುಕತೆ ನಡೆಸಿದ್ದರು.

ಈ ಮಧ್ಯೆ ರಶ್ಯ ಸೇನೆಯು ಉಕ್ರೇನ್‌ ನ ವಶದಲ್ಲಿದ್ದ ಇನ್ನೊಂದು ಹಳ್ಳಿಯನ್ನು ವಶಪಡಿಸಿಕೊಂಡಿದೆ. ಕಳೆದ ವರ್ಷ ಉಕ್ರೇನ್ ವಶಪಡಿಸಿಕೊಂಡಿದ್ದ ನಿಕೊಲ್‌ಸ್ಕಿ ಗ್ರಾಮವನ್ನು ಅದು ಮರುಸ್ವಾಧೀನಪಡಿಸಿಕೊಂಡಿದೆ.

ಗುರುವಾರ ರಾತ್ರಿ ರಶ್ಯವು ಉಡಾವಣೆಗೊಳಿಸಿದ 185 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News