Saudi Arabia | ತೈಲ ಸಂಸ್ಕರಣಾಗಾರದ ಮೇಲೆ ಹೂತಿ ದಾಳಿ: ನೇಪಾಳಿ ಕಾರ್ಮಿಕ ಮೃತ್ಯು
Screengrab : X
ರಿಯಾದ್, ನ.27: ದಕ್ಷಿಣ ಸೌದಿ ಅರೇಬಿಯಾದ ಜಜಾನ್ ನಲ್ಲಿರುವ ಸೌದಿ ಅರಾಮ್ಕೊದ ತೈಲ ಸಂಸ್ಕರಣಾಗಾರದ ಮೇಲೆ ಗುರುವಾರ ನಡೆದ ವೈಮಾನಿಕ ದಾಳಿಯಲ್ಲಿ ನೇಪಾಳಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ವಿವಿಧ ದೇಶಗಳ ಹಲವರು ಗಾಯಗೊಂಡಿದ್ದಾರೆ. ದಾಳಿಯಿಂದ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಸ್ಕರಣಾಗಾರದ ಕೆಲವು ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ಇಂಧನ ಸಚಿವಾಲಯ ತಿಳಿಸಿದೆ.
ಸಂಸ್ಕರಣಾಗಾರದ ಮೇಲೆ ಹೂತಿ ಪಡೆಗಳು ದಾಳಿ ನಡೆಸಿವೆ ಎಂದು ಸೌದಿ ನೇತೃತ್ವದ ಮಿಲಿಟರಿ ಮೈತ್ರಿಕೂಟ ಆರೋಪಿಸಿದೆ. ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡರೆ ಕಠಿಣ ಸೇನಾ ಪ್ರತಿಕ್ರಿಯೆ ನೀಡಲಾಗುವುದು ಎಂದು ಮೈತ್ರಿಕೂಟದ ವಕ್ತಾರರು ಎಚ್ಚರಿಸಿದ್ದಾರೆ.
ದಾಳಿಯಲ್ಲಿ ಬಳಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವೇದಿಕೆಯನ್ನು ಯೆಮನ್ ನ ಹೂತಿ ನಿಯಂತ್ರಿತ ಹುದೈದಾ ಪ್ರಾಂತದಲ್ಲಿ ನಾಶಪಡಿಸಿರುವುದಾಗಿ ಮೈತ್ರಿಕೂಟ ಹೇಳಿಕೊಂಡಿದೆ.
ದಾಳಿಯಿಂದ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತುರ್ತು ಮತ್ತು ತಾಂತ್ರಿಕ ತಂಡಗಳು ಘಟಕದ ಹಾನಿಯನ್ನು ಪರಿಶೀಲಿಸುತ್ತಿವೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವೂ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.