ಸಾಂದರ್ಭಿಕ ಚಿತ್ರ | Photo Credit : magnific

ಜೆರುಸಲೇಂ, ನ.27: ಇಸ್ರೇಲ್ ನಲ್ಲಿ ಸರಕಾರದ ಅನುಮೋದನೆಯೊಂದಿಗೆ ಫೆಲೆಸ್ತೀನ್ ಬಂಧಿತರನ್ನು ವ್ಯಾಪಕವಾಗಿ ಚಿತ್ರಹಿಂಸೆಗೆ ಒಳಪಡಿಸಲಾಗುತ್ತಿದೆ ಎಂದು ಇಸ್ರೇಲಿನ ಮಾನವ ಹಕ್ಕುಗಳ ಸಂಘಟನೆಯೊಂದು ಶುಕ್ರವಾರ ಆರೋಪಿಸಿದೆ. ಅಲ್ಲದೆ, ಇಂತಹ ಕೃತ್ಯಗಳನ್ನು ತಡೆಯಲು ದೇಶದ ಕಾನೂನು ಜಾರಿ ವ್ಯವಸ್ಥೆಗೆ ಇಚ್ಛಾಶಕ್ತಿಯಿಲ್ಲ ಎಂದೂ ಅದು ಹೇಳಿದೆ.

ಸರಕಾರದ ಸಮ್ಮತಿಯೊಂದಿಗೆ ನಡೆಯುತ್ತಿರುವ ಈ ಚಿತ್ರಹಿಂಸೆಯು ಇಡೀ ಇಸ್ರೇಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಚಾರಣಾ ಕೊಠಡಿಗಳಲ್ಲಿ ಚಿತ್ರಹಿಂಸೆಯ ಮೂಲಕ ಪಡೆಯಲಾದ ಹೇಳಿಕೆಗಳು ಪೊಲೀಸ್, ಪ್ರಾಸಿಕ್ಯೂಷನ್, ನ್ಯಾಯಾಂಗ ಮತ್ತು ಬಂಧನ ವ್ಯವಸ್ಥೆಗಳನ್ನು ಪ್ರವೇಶಿಸುತ್ತವೆ. ಅವು ಪ್ರಕರಣದ ಕಡತಗಳ ಭಾಗವಾಗಿ, ನ್ಯಾಯಾಂಗದ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ ಮತ್ತು ಫೆಲೆಸ್ತೀನಿಯನ್ನರನ್ನು ಅಪರಾಧಿಗಳೆಂದು ನಿರ್ಣಯಿಸಲು ಆಧಾರವಾಗುತ್ತವೆ ಎಂದು `ಇಸ್ರೇಲ್ ನಲ್ಲಿ ಚಿತ್ರಹಿಂಸೆ ವಿರೋಧಿ ಸಮಿತಿ' ತಿಳಿಸಿದೆ.

ಚಿತ್ರಹಿಂಸೆಯನ್ನು ತಡೆಯಲು ಇಸ್ರೇಲಿ ಕಾನೂನು ಜಾರಿ ವ್ಯವಸ್ಥೆಗೆ ಯಾವುದೇ ಆಸಕ್ತಿಯಿಲ್ಲ ಎಂದು ಸಮಿತಿ ಹೇಳಿದೆ. ಚಿತ್ರಹಿಂಸೆಯ ಕುರುಹುಗಳು ಸ್ಪಷ್ಟವಾಗಿದ್ದರೂ ಮತ್ತು ನಿರ್ವಿವಾದವಾಗಿದ್ದರೂ ನ್ಯಾಯಾಧೀಶರು, ವಕೀಲರು ಹಾಗೂ ಹಿರಿಯ ಅಧಿಕಾರಿಗಳು ಅವುಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಈ ಪದ್ಧತಿಗೆ ಸಮ್ಮತಿ ಸೂಚಿಸುತ್ತಾರೆ. ವಿಚಾರಣೆಯ ಸಮಯದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳ ಬಗ್ಗೆ ತೀರ್ಪು ನೀಡುವ ಮೊದಲು ನ್ಯಾಯಾಧೀಶರು ಬಂಧಿತರ ಮೇಲಿನ ಗಾಯದ ಗುರುತುಗಳನ್ನು ನೋಡುತ್ತಾರೆ ಮತ್ತು ಹಿಂಸಾಚಾರದ ಬಗ್ಗೆ ಅವರ ದೂರುಗಳನ್ನು ಕೇಳುತ್ತಾರೆ. ಆದರೂ ಇಂತಹ ಕೃತ್ಯಗಳನ್ನು ತಡೆಯಲು ಅಥವಾ ತನಿಖೆ ನಡೆಸಲು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ವರದಿ ತಿಳಿಸಿದೆ.

`ಚಿತ್ರಹಿಂಸೆಯಿಂದ ಕಳಂಕಿತ: ಇಸ್ರೇಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಫೆಲೆಸ್ತೀನ್ ಬಂಧಿತರು' ಎಂಬ ಶೀರ್ಷಿಕೆಯ ಈ ವರದಿಯು, ಕಳೆದ ಒಂದು ದಶಕದಲ್ಲಿ ಸಮಿತಿಯು ದಾಖಲಿಸಲು ಸಹಾಯ ಮಾಡಿದ 42 ದೂರುಗಳನ್ನು ಪರಿಶೀಲಿಸಿದೆ. ಈ ದೂರುಗಳಲ್ಲಿ ತೀವ್ರ ನಿದ್ರಾಹೀನತೆಗೆ ಒಳಪಡಿಸುವುದು, ಪುರುಷರು ಮತ್ತು ಮಹಿಳೆಯರನ್ನು ಅತ್ಯಂತ ಕಷ್ಟಕರ ಭಂಗಿಗಳಲ್ಲಿ ನಿಲ್ಲಿಸುವುದು ಹಾಗೂ ಇತರ ರೀತಿಯ ತೀವ್ರ ದೈಹಿಕ ಹಿಂಸಾಚಾರದ ಪ್ರಕರಣಗಳು ಸೇರಿವೆ.

1962ರ ನಂತರ ಮೊದಲ ಬಾರಿಗೆ ಇಸ್ರೇಲ್ ನಲ್ಲಿ ಮರಣದಂಡನೆ ಜಾರಿಗೊಳಿಸಲು ನಡೆಯುತ್ತಿರುವ ಪ್ರಯತ್ನಗಳು, ಚಿತ್ರಹಿಂಸೆಯ ಮೂಲಕ ಪಡೆಯಲಾದ ತಪ್ಪೊಪ್ಪಿಗೆ ಹೇಳಿಕೆಗಳ ಆಧಾರದ ಮೇಲೆ ಶಿಕ್ಷೆಗೊಳಗಾದ ಫೆಲೆಸ್ತೀನಿಯನ್ನರ ಮೇಲೆ ಪರಿಣಾಮ ಬೀರಬಹುದು ಎಂದು ಸಮಿತಿ ಎಚ್ಚರಿಸಿದೆ.

►ಇಸ್ರೇಲಿನ ಮರಣದಂಡನೆ ಕಾನೂನು

ಈ ವರ್ಷದ ಮಾರ್ಚ್ 30ರಂದು, ಫೆಲೆಸ್ತೀನ್ ಕೈದಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ನೀಡುವ ಕಾನೂನಿಗೆ ಇಸ್ರೇಲಿ ಸಂಸತ್ತು ಅಂತಿಮ ಅನುಮೋದನೆ ನೀಡಿದ್ದು, ಇದು ಮೇ ತಿಂಗಳಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಜಾರಿಗೆ ಬಂದಿದೆ.

`ಭಯೋತ್ಪಾದಕ' ಕೃತ್ಯಗಳೆಂದು ಇಸ್ರೇಲ್ ವರ್ಗೀಕರಿಸಿದ ದಾಳಿಗಳಲ್ಲಿ ಇಸ್ರೇಲಿಗರನ್ನು ಉದ್ದೇಶಪೂರ್ವಕವಾಗಿ ಕೊಂದ ಆರೋಪದ ಮೇಲೆ ಮಿಲಿಟರಿ ನ್ಯಾಯಾಲಯಗಳಿಂದ ಅಪರಾಧಿಗಳೆಂದು ಸಾಬೀತಾದ ಫೆಲೆಸ್ತೀನಿಯನ್ನರಿಗೆ ಗಲ್ಲುಶಿಕ್ಷೆ ವಿಧಿಸಲು ಈ ಕಾನೂನು ಅವಕಾಶ ನೀಡುತ್ತದೆ.

ಪ್ರಾಸಿಕ್ಯೂಟರ್ ಗಳ ಮನವಿಯಿಲ್ಲದಿದ್ದರೂ ಬಹುಮತದ ನ್ಯಾಯಾಧೀಶರು ಮರಣದಂಡನೆ ವಿಧಿಸಲು ಇದು ಅನುಮತಿಸುತ್ತದೆ. ಆದರೆ ಇದೇ ಕಾನೂನು ಪ್ರಕ್ರಿಯೆಯಿಂದ ಇಸ್ರೇಲಿ ಆಕ್ರಮಣಕಾರರನ್ನು ಹೊರಗಿಡಲಾಗಿದೆ. ಫೆಲೆಸ್ತೀನ್ ಕೈದಿಗಳಿಗೆ ಮರಣದಂಡನೆ ವಿಧಿಸುವ ಕಾನೂನನ್ನು ರದ್ದುಗೊಳಿಸುವಂತೆ ವಿಶ್ವಸಂಸ್ಥೆ ಇಸ್ರೇಲ್ಗೆ ಕರೆ ನೀಡಿದ್ದರೆ, `ಹ್ಯೂಮನ್ ರೈಟ್ಸ್ ವಾಚ್' ಇದನ್ನು ತಾರತಮ್ಯದಿಂದ ಕೂಡಿದ ಶಾಸನ ಎಂದು ಖಂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor