ಮಾರಾಟದಲ್ಲಿ ಇಳಿಕೆ, ಬಹಿಷ್ಕಾರಗಳಿಂದ 11 ಬಿಲಿಯನ್ ಡಾಲರ್‌ನಷ್ಟು ಮೌಲ್ಯ ಕಳೆದುಕೊಂಡ ಸ್ಟಾರ್‌ಬಕ್ಸ್
Photo credit: X/@Starbucks
ನ್ಯೂಯಾರ್ಕ್: ಜಾಗತಿಕ ರಾಜಕೀಯ ಉದ್ವಿಗ್ನತೆಗಳು, ಮಾರಾಟದಲ್ಲಿ ಕುಸಿತ ಹಾಗೂ ಬಹಿಷ್ಕಾರಗಳು ಸಿಯಾಟಲ್ ಮೂಲದ ಸ್ಟಾರ್‌ಬಕ್ಸ್ ಕಾರ್ಪೊರೇಷನ್ ಮೇಲೆ ಕೂಡಾ ಪರಿಣಾಮ ಬೀರಿದ್ದು ಕಂಪೆನಿಯ ಒಟ್ಟು ಮೌಲ್ಯ ಶೇ 9.4 ರಷ್ಟು, ಅಂದರೆ ಅಂದಾಜು 11 ಬಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿದೆ.
ಸ್ಟಾರ್‌ಬಕ್ಸ್‌ನ ನವೆಂಬರ್ 16 ರೆಡ್ ಕಪ್ ಡೇ ಪ್ರಚಾರದ ನಂತರ ಕೇವಲ 19 ದಿನಗಳ ಅವಧಿಯಲ್ಲಿ ಸ್ಟಾರ್‌ಬಕ್ಸ್ ಷೇರುಗಳ ಮೌಲ್ಯ ಶೇ8.96ರಷ್ಟು ಕುಸಿತ ಕಂಡಿದ್ದು ಇದು ಅಂದಾಜು 11 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಕ್ಕೆ ಸಮನಾಗಿದೆ.
ರಜಾಕಾಲದ ಕೊಡುಗೆಗಳಿಗೆ ನೀರಸ ಪ್ರತಿಕ್ರಿಯೆ ಹಾಗೂ ಕಡಿಮೆ ಮಾರಾಟ ಕುರಿತು ವಿಶ್ಲೇಷಕರ ವರದಿಯ ನಡುವೆ ಈ ಬೆಳವಣಿಗೆ ನಡೆದಿದೆ. ಫೆಲೆಸ್ತೀನೀಯರಿಗೆ ಬೆಂಬಲ ಘೋಷಿಸಿ ಸ್ಟಾರ್‌ಬಕ್ಸ್ ವರ್ಕರ್ಸ್ ಲಿಮಿಟೆಡ್ ಮಾಡಿದ್ದ ಟ್ವೀಟ್ ನಂತರ ಕಂಪೆನಿ ಹಲವು ಸಮಸ್ಯೆಗಳನ್ನು ಎದುರಿಸಿದ್ದು ಬಹಿಷ್ಕಾರಗಳನ್ನು ಕೂಡ ಎದುರಿಸುವಂತಾಗಿದೆ.
ಇಸ್ರೇಲ್ ಅನ್ನು ಬೆಂಬಲಿಸಿದ ಹಲವಾರು ಜಾಗತಿಕ ಬ್ರ್ಯಾಂಡ್‌ಗಳ ಮೇಲಿನ ಬಹಿಷ್ಕಾರಗಳಂತೆಯೇ ಸ್ಟಾರ್‌ಬಕ್ಸ್ ಬಹಿಷ್ಕಾರವೂ ನಡೆದಿದೆ.
ಬಹಿಷ್ಕಾರಗಳಿಂದ ಬಾಧಿತವಾಗಿ ವೆಚ್ಚ ಕಡಿತಗಳಿಗೆ ಮೊರೆ ಹೋಗಿ ಈಜಿಪ್ಟ್‌ನಲ್ಲಿ ಸ್ಟಾರ್‌ಬಕ್ಸ್ ಹಲವಾರು ಉದ್ಯೋಗಿಗಳನ್ನು ನವೆಂಬರ್ ತಿಂಗಳಿನಲ್ಲಿ ಕೈಬಿಟ್ಟಿದೆ.