×
Ad

ಟರ್ಕಿಯಲ್ಲಿ ರಶ್ಯ-ಉಕ್ರೇನ್ ನಡುವೆ ಮಾತುಕತೆ ಮುಕ್ತಾಯ

Update: 2025-05-16 21:20 IST

PC : NDTV

ಅಂಕಾರ : ಕಳೆದ ಮೂರು ವರ್ಷಗಳಲ್ಲಿ ಮೊದಲ ನೇರ ಶಾಂತಿ ಮಾತುಕತೆಗೆ ರಶ್ಯ ಮತ್ತು ಉಕ್ರೇನ್‌ ನ ನಿಯೋಗಗಳು ಶುಕ್ರವಾರ ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಸಭೆ ನಡೆಸಿರುವುದಾಗಿ ವರದಿಯಾಗಿದೆ.

ಉಕ್ರೇನ್‌ ನ ರಕ್ಷಣಾ ಸಚಿವ ರುಸ್ತೆಮ್ ಉಮೆರೊವ್ ನೇತೃತ್ವದ ನಿಯೋಗ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಪ್ತ ವ್ಲಾದಿಮಿರ್ ಮೆಡಿಂಸ್ಕಿ ನೇತೃತ್ವದ ನಿಯೋಗ ಶಾಂತಿ ಮಾತುಕತೆಯಲ್ಲಿ ಪಾಲ್ಗೊಂಡಿರುವ ಫೋಟೋವನ್ನು ಉಕ್ರೇನ್‌ ನ ವಿದೇಶಾಂಗ ಇಲಾಖೆಯ ವಕ್ತಾರರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ನೇರ ಮಾತುಕತೆಯಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಪಾಲ್ಗೊಂಡಿಲ್ಲ. ಬೇಷರತ್ ಕದನ ವಿರಾಮದ ಬಗ್ಗೆ ಉಕ್ರೇನ್ ನಿಯೋಗ ಪ್ರತಿಪಾದಿಸಿದರೆ, ರಶ್ಯನ್ ನಿಯೋಗ ಸಂಘರ್ಷದ ಮೂಲ ಕಾರಣದ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದೆ. ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿದಾನ್ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ಹೇಳಿವೆ.

ರಶ್ಯ ಅಧ್ಯಕ್ಷರು ಪಾಲ್ಗೊಂಡರೆ ಮಾತ್ರ ತಾನೂ ಸಭೆಯ ಭಾಗವಾಗಿರುತ್ತೇನೆ ಎಂದು ಝೆಲೆನ್‍ಸ್ಕಿ ಹೇಳಿದ್ದರು. ಪುಟಿನ್ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳದಿರುವುದನ್ನು ಟೀಕಿಸಿರುವ ಝೆಲೆನ್‍ಸ್ಕಿ ` ಮಾತುಕತೆಗೆ ಕೆಳ ಮಟ್ಟದ ನಿಯೋಗವನ್ನು ಕಳುಹಿಸಿಸುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ರಶ್ಯ ಗಂಭೀರ ಪ್ರಯತ್ನ ಮಾಡಿಲ್ಲ' ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಉಕ್ರೇನ್ ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿದ ಕಗ್ಗಂಟನ್ನು ಬಿಡಿಸಲು ತನ್ನ ಮತ್ತು ಪುಟಿನ್ ನಡುವಿನ ಸಭೆ ನಿರ್ಣಾಯಕವಾಗಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದು, ಮಾತುಕತೆ ನಡೆಸಲು ಇದು ಸಕಾಲವಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News