ಒಂದು ಶತಕೋಟಿ ಡಾಲರ್ ನೀಡಿದರೆ ಗಾಝಾ ಶಾಂತಿ ಮಂಡಳಿಯ ಕಾಯಂ ಸದಸ್ಯತ್ವ: ವರದಿ
ಟ್ರಂಪ್|Photo:PTI
ನ್ಯೂಯಾರ್ಕ್, ಜ.18: ಗಾಝಾದ ಹೊಸ `ಶಾಂತಿ ಮಂಡಳಿಯ ಕಾಯಂ ಸದಸ್ಯತ್ವ ಬೇಕಿದ್ದರೆ ಕನಿಷ್ಠ 1 ಶತಕೋಟಿ ಡಾಲರ್ ಪಾವತಿಸಬೇಕು ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಆಡಳಿತವು ದೇಶಗಳಿಗೆ ಸೂಚಿಸಿರುವುದಾಗಿ `ಬ್ಲೂಮ್‍ಬರ್ಗ್' ವರದಿ ಮಾಡಿದೆ.
ಪ್ರಸ್ತಾವಿತ ಶಾಂತಿ ಮಂಡಳಿಯ ಕರಡು ಸನ್ನದು(ಚಾರ್ಟ್‍ರ್) ಪ್ರಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾಪಕಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಸದಸ್ಯತ್ವಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಯಾವುದೇ ನಿರ್ಧಾರವು ಬಹುಮತದ ಆಧಾರದಲ್ಲಿ ನಡೆಯುತ್ತದೆ ಮತ್ತು ಇದನ್ನು ಅಧ್ಯಕ್ಷರು ಅನುಮೋದಿಸಬೇಕು. ಪ್ರತೀ ಸದಸ್ಯ ರಾಷ್ಟ್ರಕ್ಕೆ ಒಂದು ಓಟು ಇರುತ್ತದೆ. ಸನ್ನದು ಅನುಷ್ಠಾನಕ್ಕೆ ಬಂದ ದಿನದಿಂದ 3 ವರ್ಷಗಳವರೆಗೆ ಪ್ರತೀ ಸದಸ್ಯ ದೇಶಗಳ ಸದಸ್ಯಾವಧಿ ಇರುತ್ತದೆ. ಸನ್ನದು ಜಾರಿಗೆ ಬಂದ 1 ವರ್ಷದೊಳಗೆ 1 ಶತಕೋಟಿ ಡಾಲರ್ ಹಣವನ್ನು ನಗದು ನಿಧಿಯ ರೂಪದಲ್ಲಿ ಶಾಂತಿ ಮಂಡಳಿಗೆ ಪಾವತಿಸುವ ಸದಸ್ಯ ರಾಷ್ಟ್ರಗಳಿಗೆ 3 ವರ್ಷದ ಮಿತಿ ಅನ್ವಯಿಸುವುದಿಲ್ಲ.
ಶಾಂತಿ ಮಂಡಳಿಯ ಮೂರು ಸದಸ್ಯ ರಾಷ್ಟ್ರಗಳು ಸನ್ನದಿಗೆ ಒಪ್ಪಿಗೆ ಸೂಚಿಸಿದರೆ ಅದು ಅಧಿಕೃತವಾಗಲಿದೆ. ಸದಸ್ಯನನ್ನು ವಜಾಗೊಳಿಸುವ ಅಧಿಕಾರವನ್ನೂ ಟ್ರಂಪ್ ಹೊಂದಿರುತ್ತಾರೆ. ಆದರೆ ಮೂರನೇ ಎರಡು ಬಹುಮತವಿದ್ದರೆ ಸದಸ್ಯರು ಇದಕ್ಕೆ ತಡೆಯೊಡ್ಡಬಹುದು. ಈ ಮಧ್ಯೆ, ಕರಡು ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಟೀಕಿಸಿದ್ದಾರೆ . ಶಾಂತಿ ಮಂಡಳಿ ವರ್ಷಕ್ಕೆ ಕನಿಷ್ಠ ಒಮ್ಮೆ ಸಭೆ ನಡೆಸಬೇಕು ಮತ್ತು ಸಭೆಯ ಅಜೆಂಡಾವನ್ನು ಟ್ರಂಪ್ ಅನುಮೋದಿಸಬೇಕು ಹಾಗೂ ಶಾಂತಿ ಮಂಡಳಿಯ ಹಣವನ್ನು ಟ್ರಂಪ್ ನಿಯಂತ್ರಿಸುತ್ತಾರೆ ಎಂಬ ಪ್ರಸ್ತಾಪಕ್ಕೆ ಹಲವು ದೇಶಗಳು ಆಕ್ಷೇಪಿಸಿವೆ ಎಂದು ವರದಿಯಾಗಿದೆ.