ಗಾಝಾದ ಪರಿಸ್ಥಿತಿ ಬಗ್ಗೆ ನೆತನ್ಯಾಹು ವಿರುದ್ಧ ರೇಗಾಡಿದ ಟ್ರಂಪ್: ವರದಿ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (PC : PTI)
ಲಂಡನ್, ಆ.11: ಗಾಝಾದಲ್ಲಿ ಮಕ್ಕಳು ಹಸಿವಿನಿಂದ ಬಳಲುತ್ತಿರುವ ವೀಡಿಯೊಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ತರಾಟೆಗೆತ್ತಿಕೊಂಡಿರುವುದಾಗಿ ಎನ್‍ಬಿಸಿ ನ್ಯೂಸ್ ವರದಿ ಮಾಡಿದೆ.
ಜುಲೈ 28ರಂದು ನೆತನ್ಯಾಹು ಟ್ರಂಪ್ ರನ್ನು ಫೋನಿನ ಮೂಲಕ ಸಂಪರ್ಕಿಸಿದ್ದರು. ಆಗ ಟ್ರಂಪ್ ಗಾಝಾದಲ್ಲಿನ ಜನತೆ ಹಸಿವಿನಿಂದ ಬಳಲುತ್ತಿರುವ ಮಾಧ್ಯಮಗಳ ವರದಿ ಹಾಗೂ ಮಕ್ಕಳು ಆಹಾರವಿಲ್ಲದೆ ಸೊರಗಿರುವ ವೀಡಿಯೋದ ಬಗ್ಗೆ ಪ್ರಶ್ನಿಸಿದ್ದರು. `ಅದೆಲ್ಲಾ ಸುಳ್ಳಿನ ಕಂತೆ. ಹಮಾಸ್ ಸೃಷ್ಟಿಸಿದ ನಕಲಿ ವೀಡಿಯೊ' ಎಂದು ನೆತನ್ಯಾಹು ಸಮಜಾಯಿಷಿ ನೀಡಲು ಮುಂದಾದಾಗ ಟ್ರಂಪ್ ತಾಳ್ಮೆ ಕಳೆದುಕೊಂಡು ಕೂಗಾಡಿದರು. ಈ ವೀಡಿಯೊ ಮತ್ತು ವರದಿ ನಕಲಿಯಲ್ಲ ಎಂಬುದಕ್ಕೆ ತನ್ನಲ್ಲಿ ಪುರಾವೆಗಳಿವೆ ಎಂದು ನೆತನ್ಯಾಹುರನ್ನು ತರಾಟೆಗೆತ್ತಿಕೊಂಡಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.