ಪ್ರತಿ ವ್ಯಕ್ತಿಗೆ 10 ಸಾವಿರ ಡಾಲರ್ ನಿಂದ 1 ಲಕ್ಷ ಡಾಲರ್ ಬೆಲೆ ತೆತ್ತು ಗ್ರೀನ್‌ಲ್ಯಾಂಡ್ ಖರೀದಿಗೆ ಮುಂದಾದ ಟ್ರಂಪ್!
ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್: ಡೆನ್ಮಾರ್ಕ್ ನಿಂದ ಗ್ರೀನ್‌ಲ್ಯಾಂಡ್ ಬೇರ್ಪಡಿಸುವ ಯೋಜನೆ ಜಾರಿಗೆ ಮುಂದಾಗಿರುವ ಡೊನಾಲ್ಡ್ ಟ್ರಂಪ್ ಆಡಳಿತ, ಗ್ರೀನ್‌ಲ್ಯಾಂಡ್ ನ ಪ್ರತಿ ನಿವಾಸಿಗೆ 10 ಸಾವಿರದಿಂದ ಒಂದು ಲಕ್ಷ ಡಾಲರ್ ನೀಡಿ ಅವರ ಮನವೊಲಿಸುವ ಯೋಜನೆಯನ್ನು ತೀವ್ರವಾಗಿ ಪರಿಗಣಿಸುತ್ತಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಗ್ರೀನ್‌ಲ್ಯಾಂಡ್ ನಿವಾಸಿಗಳಿಗೆ ದೊಡ್ಡ ಮೊತ್ತದ ಹಣವನ್ನು ನೀಡುವ ಪ್ರಸ್ತಾವದ ಬಗ್ಗೆ ಅಧಿಕಾರಿಗಳು ಪರಸ್ಪರ ಚರ್ಚೆ ನಡೆಸಿದ್ದಾರೆ. ಈ ದ್ವೀಪರಾಷ್ಟ್ರವು ಇದೀಗ ಅರೆಸ್ವಾಯತ್ತ ಡ್ಯಾನಿಷ್ ಭೂಪ್ರದೇಶವಾಗಿದ್ದು, 57 ಸಾವಿರ ಜನಸಂಖ್ಯೆ ಹೊಂದಿದೆ ಹಾಗೂ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಖರೀದಿ ಯೋಜನೆ ಇದೀಗ ಪ್ರಾಥಮಿಕ ಹಂತದಲ್ಲಿದೆ ಎಂದು ಹೇಳಲಾಗಿದೆ. ಈ ಯೋಜನೆ ಜಾರಿಯಿಂದ ಬೊಕ್ಕಸಕ್ಕೆ 600 ಕೋಟಿ ಡಾಲರ್ ಹೊರೆ ಬೀಳಲಿದೆ ಎಂದು ಎಂದು ಮೂಲಗಳು ತಿಳಿಸಿವೆ.
ಈ ಪ್ರಸ್ತಾವವು ಗ್ರೀನ್ಲ್ಯಾಂಡ್ ಅನ್ನು “ಖರೀದಿಸುವ” ಕುರಿತು ವೈಟ್‌ಹೌಸ್‌ನಲ್ಲಿ ಹಿಂದಿನಿಂದಲೂ ಚರ್ಚೆಯಲ್ಲಿರುವ ಯೋಚನೆಗಳಿಗೆ ಹೊಂದಿಕೆಯಾಗುತ್ತದೆ. ಆದರೆ ಡೆನ್ಮಾರ್ಕ್ ರಾಜಧಾನಿ ಕೋಪನ್ಹೇಗನ್ ಹಾಗೂ ಗ್ರೀನ್ಲ್ಯಾಂಡ್ ರಾಜಧಾನಿ ನ್ಯೂಕ್ ಈ ಯತ್ನವನ್ನು ತೀವ್ರವಾಗಿ ತಿರಸ್ಕರಿಸಿದ್ದು, “ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ” ಎಂಬ ನಿಲುವನ್ನು ಪುನರುಚ್ಚರಿಸಿವೆ.
ದೊಡ್ಡ ಮೊತ್ತವನ್ನು ಪಾವತಿಸುವ ಪ್ರಸ್ತಾಪ, ದ್ವೀಪರಾಷ್ಟ್ರವನ್ನು ಖರೀದಿಸುವ ಹಲವು ಯೋಜನೆಗಳಲ್ಲಿ ಒಂದು ಎನ್ನಲಾಗಿದ್ದು, ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಳ್ಳುವುದು ಹಾಗೂ ಸೇನಾಬಲವನ್ನು ಬಳಸುವ ಪ್ರಸ್ತಾವಗಳೂ ಚಿಂತನೆಯಲ್ಲಿವೆ ಎನ್ನಲಾಗಿದೆ.
ಗ್ರೀನ್‌ಲ್ಯಾಂಡ್ ಅಮೆರಿಕ ಜತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಬಲವಂತದ ಬೇರ್ಪಡಿಕೆಯು ನ್ಯಾಟೊ ದೇಶಗಳಿಗೆ ಕರಾಳ ನಿರ್ಧಾರವಾಗಲಿದೆ.
ಈ ವಿಚಾರವನ್ನು ಟ್ರಂಪ್ ಪ್ರಸ್ತಾಪಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಗ್ರೀನ್‌ಲ್ಯಾಂಡ್ ಪ್ರಧಾನಿ ಜೆನ್ಸ್ ಫೆಡ್ರಿಕ್ ನೆಲ್ಸನ್, "ಇಷ್ಟು ಸಾಕು..ಗ್ರೀನ್‌ಲ್ಯಾಂಡ್ ಬೇರ್ಪಡಿಸುವ ಯಾವುದೇ ಭ್ರಮೆ ಬೇಡ" ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಯೂರೋಪಿಯನ್ ಮುಖಂಡರು ಕೂಡಾ ಅಮೆರಿಕ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.