ಇರಾನ್ ನಲ್ಲಿನ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಿದರೆ ಅಮೆರಿಕ ಮಧ್ಯಪ್ರವೇಶ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (File Photo: PTI)
ವಾಷಿಂಗ್ಟನ್: ಇರಾನ್ ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿ ಹಿಂಸಾತ್ಮಕವಾಗಿ ಹತ್ತಿಕ್ಕಿದರೆ, ಅವರ ರಕ್ಷಣೆಗೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶುಕ್ರವಾರ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಶಿಯಲ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಇರಾನ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದ್ದು, ಪರಿಸ್ಥಿತಿ ಗಂಭೀರವಾದರೆ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಇರಾನ್ ನಲ್ಲಿ ಕಂಡುಬಂದ ಅತಿದೊಡ್ಡ ಪ್ರತಿಭಟನೆಗಳು ಹಲವು ಪ್ರಾಂತ್ಯಗಳಲ್ಲಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿವೆ. ಈ ಪ್ರತಿಭಟನೆಗಳಲ್ಲಿ ಹಲವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇರಾನ್ ಕರೆನ್ಸಿ ಇರಾನ್ ರಿಯಾಲ್ ತೀವ್ರ ಕುಸಿತ ಕಂಡಿದೆ. ದಿನೇದಿನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನು ವಿರೋಧಿಸಿ, ಅಂಗಡಿ ಮಾಲೀಕರು ರವಿವಾರದಿಂದ ಪ್ರತಿಭಟನೆ ಆರಂಭಿಸಿದ್ದರು. ನಂತರ ಈ ಅದು ದೇಶದ ಹಲವು ಭಾಗಗಳಿಗೆ ವಿಸ್ತರಿಸಿದ್ದು, ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ಹೆಚ್ಚಾಗಿವೆ.
ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅಂತರರಾಷ್ಟ್ರೀಯ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿಸಿದ ಬಳಿಕ, 2018ರಲ್ಲಿ ಇರಾನ್ ಮೇಲೆ ಮತ್ತೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದಾಗಿ ಇರಾನ್‌ನ ಆರ್ಥಿಕತೆ ಹಲವು ವರ್ಷಗಳಿಂದ ಮೇಲೇಳಲು ಒದ್ದಾಡುತ್ತಿದೆ ಎಂದು ವರದಿಯಾಗಿದೆ.