×
Ad

ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್ ಆಗಿ ಝೊಹ್ರಾನ್ ಮಮ್ದಾನಿ ಪ್ರಮಾಣವಚನ

Update: 2026-01-01 10:59 IST

ನ್ಯೂಯಾರ್ಕ್, ಜ.1: ಡೆಮಾಕ್ರಟಿಕ್ ಪಕ್ಷದ ನಾಯಕ, ಸಮಾಜವಾದಿ ಝೊಹ್ರಾನ್ ಮಮ್ದಾನಿ ಗುರುವಾರ ಮುಂಜಾನೆ ಅಮೆರಿಕದ ಅತಿದೊಡ್ಡ ನಗರ ನ್ಯೂಯಾರ್ಕ್ ನ 112ನೇ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. 

34 ವರ್ಷದ ಭಾರತೀಯ ಮೂಲದ ಮಮ್ದಾನಿ, ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮೇಯರ್, ದಕ್ಷಿಣ ಏಷ್ಯಾ ಮೂಲದ ಮೊದಲ ಮೇಯರ್ ಹಾಗೂ ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಈ ಹುದ್ದೆ ಅಲಂಕರಿಸಿದ ಅತಿಕಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಕ್ವೀನ್ಸ್ ಕ್ಷೇತ್ರದ ಮಾಜಿ ರಾಜ್ಯ ಜನಪ್ರತಿನಿಧಿಯಾಗಿದ್ದ ಮಮ್ದಾನಿ, ಸಾರ್ವತ್ರಿಕ ಶಿಶುಪಾಲನಾ ಯೋಜನೆ ಜಾರಿ, ಸುಮಾರು 20 ಲಕ್ಷ ಬಾಡಿಗೆ ಮನೆಗಳ ಬಾಡಿಗೆ ಸ್ಥಗಿತ ಮತ್ತು ನಗರ ಬಸ್ ಸೇವೆಯನ್ನು ಉಚಿತ ಹಾಗೂ ವೇಗಗೊಳಿಸುವುದಾಗಿ ಭರವಸೆ ನೀಡಿದ್ದರು.

ಮಮ್ದಾನಿ ಅವರು ಪತ್ನಿ, ಕಲಾವಿದರಾದ ರಾಮ ದುವಾಜಿ ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ಮಧ್ಯರಾತ್ರಿ ನಂತರ ಪ್ರಮಾಣವಚನ ಸ್ವೀಕರಿಸಿದರು. ನ್ಯೂಯಾರ್ಕ್ ಸ್ಟೇಟ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಪ್ರಮಾಣವಚನ ಬೋಧಿಸಿದರು. ಮ್ಯಾನ್‌ಹ್ಯಾಟನ್‌ ನ ಸಿಟಿ ಹಾಲ್ ಪಾರ್ಕ್ ಅಡಿಯಲ್ಲಿ ಇರುವ ಹಳೆಯ ಸಿಟಿ ಹಾಲ್ ಸುರಂಗಮಾರ್ಗ ನಿಲ್ದಾಣದಲ್ಲಿ ಈ ಸಮಾರಂಭ ನಡೆಯಿತು. 1904ರಲ್ಲಿ ಆರಂಭಗೊಂಡು 1945ರಲ್ಲಿ ಮುಚ್ಚಲ್ಪಟ್ಟ ಈ ನಿಲ್ದಾಣವು ನ್ಯೂಯಾರ್ಕ್‌ನ ಮೂಲ ಸುರಂಗಮಾರ್ಗ ನಿಲ್ದಾಣಗಳಲ್ಲಿ ಒಂದಾಗಿದೆ.

ಐತಿಹಾಸಿಕ ನಿಷ್ಕ್ರಿಯ ಸುರಂಗಮಾರ್ಗ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಮ್ದಾನಿ ಕುರಾನ್ ಮೇಲೆ ಕೈ ಇಟ್ಟು ಪ್ರಮಾಣವಚನ ಸ್ವೀಕರಿಸಿದರು. “ಇದು ನನ್ನ ಜೀವನದ ಮಹತ್ತರ ಗೌರವ,” ಎಂದು ಅವರು ಹೇಳಿದರು.

ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಸಿಟಿ ಹಾಲ್‌ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಅಮೆರಿಕದ ಸೆನೆಟರ್ ಬರ್ನಿ ಸ್ಯಾಂಡರ್ಸ್ ಅವರ ಸಮ್ಮುಖದಲ್ಲಿ ಮಮ್ದಾನಿ ಮತ್ತೊಮ್ಮೆ ಸಾರ್ವಜನಿಕವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಂತರ ‘ಕ್ಯಾನ್ಯನ್ ಆಫ್ ಹೀರೋಸ್’ ಎಂದೇ ಪ್ರಸಿದ್ಧಿಯಾದ ಬ್ರಾಡ್‌ವೇ ವಿಸ್ತಾರದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News