ಪಾನಮತ್ತ ಪೈಲಟ್ ವಿರುದ್ಧ ಜ.26ರೊಳಗೆ ಕ್ರಮ ಕೈಗೊಳ್ಳಿ: ಏರ್ ಇಂಡಿಯಾಗೆ ಕೆನಡಾ ಸೂಚನೆ
PC: x.com/aviationbrk
ಹೊಸದಿಲ್ಲಿ: ದೇಶದ ಕಾನೂನನ್ನು ಉಲ್ಲಂಘಿಸಿ 2025ರ ಡಿಸೆಂಬರ್ 23ರಂದು ವಿಮಾನ ಚಲಾವಣೆಗೆ ಮುನ್ನ ಮದ್ಯಪಾನ ಮಾಡಿದ್ದ ಪೈಲಟ್ ವಿರುದ್ಧ ಈ ತಿಂಗಳ 26ರೊಳಗೆ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಕೆನಡಾ ಸರ್ಕಾರ ಏರ್ ಇಂಡಿಯಾಗೆ ಸೂಚನೆ ನೀಡಿದೆ.
ಉಸಿರಾಟ ವಿಶ್ಲೇಷಕ ( breathalyser) ಪರೀಕ್ಷೆಯಲ್ಲಿ ಪೈಲಟ್ ಮದ್ಯಪಾನ ಮಾಡಿರುವುದು ದೃಢಪಟ್ಟ ಮರುದಿನವೇ ಟ್ರಾನ್ಸ್ ಪೋರ್ಟ್ ಕೆನಡಾ ಈ ಬಗ್ಗೆ ಏರ್ ಇಂಡಿಯಾಗೆ ಮಾಹಿತಿ ನೀಡಿದ್ದು, ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಇಲಾಖೆಯ ಸುರಕ್ಷಾ ನಿರ್ವಹಣಾ ವ್ಯವಸ್ಥೆಯಡಿ "ಪರಿಹಾರಾತ್ಮಕ ಕ್ರಮ" ಕೈಗೊಳ್ಳುವಂತೆ ಆದೇಶ ನೀಡಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ, ಪರೀಕ್ಷೆಯಲ್ಲಿ ಪತ್ತೆಯಾದ ಆಲ್ಕೋಹಾಲ್ ಮಟ್ಟ ಸೇರಿದಂತೆ ಕೆನಡಾದಿಂದ ಬ್ರೀಥಲೈಸರ್ ಪರೀಕ್ಷೆಯ ವಿವರಗಳನ್ನು ಕೋರಿದೆ ಎಂದು ಡಿಜಿಸಿಎಗೆ ತಿಳಿಸಿದೆ.
"ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ನೀಡಿದ ಮಾಹಿತಿಯಂತೆ ಕ್ಯಾಪ್ಟನ್ ಅವರು ಏರ್ ಇಂಡಿಯಾ ವಿಮಾನ ಎಐ 186ಗೆ ಡಿಸೆಂಬರ್ 23ರಂದು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾಗಿದ್ದು, ಕರ್ತವ್ಯಕ್ಕೆ ಸೂಕ್ತವಲ್ಲ ಎಂದು ನಿರ್ಧರಿಸಲಾಗಿತ್ತು. ವ್ಯಾಂಕೋವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಇದು ದೃಢಪಟ್ಟಿದ್ದು, ವಿಮಾನದಿಂದ ಹೊರ ತೆರಳುವಂತೆ ಸೂಚಿಸಲಾಗಿತ್ತು. ಇದು ಕೆನಡಾದ ವೈಮಾನಿಕ ನಿಬಂಧನೆಗಳಿಗೆ ವಿರುದ್ಧ ಎಂದು ನಿರ್ಧರಿಸಲಾಗಿದ್ದು, ಇದು ಟಿಸಿಸಿಎ ನೀಡುವ ಏರ್ ಇಂಡಿಯಾದ ವಿದೇಶಿ ವಿಮಾನ ಆಪರೇಟರ್ ಸರ್ಟಿಫಿಕೆಟ್ ಗೆ ಕೂಡಾ ವಿರುದ್ಧ ಎಂದು ನಿರ್ಧರಿಸಲಾಗಿದೆ" ಎಂದು ಏರ್ ಇಂಡಿಯಾಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.