×
Ad

ಟ್ರಂಪ್ ಕ್ರಿಸ್‌ಮಸ್ ಕೊಡುಗೆ | ಅಮೆರಿಕ ತೊರೆಯಬಯಸುವ ಅಕ್ರಮ ವಲಸಿಗರಿಗೆ 3 ಸಾವಿರ ಡಾಲರ್ ಪ್ರೋತ್ಸಾಹಧನ

Update: 2025-12-23 22:31 IST

ಡೊನಾಲ್ಡ್ ಟ್ರಂಪ್ | Photo Credit : PTI  

ವಾಶಿಂಗ್ಟನ್,ಡಿ.23: ದೇಶವನ್ನು ಸ್ವಯಂಪ್ರೇರಿತವಾಗಿ ತೊರೆಯಲು ಬಯಸುವ ಅಕ್ರಮ ವಲಸಿಗರಿಗೆ ಕ್ರಿಸ್‌ಮಸ್ ಹಬ್ಬದ ಉಡುಗೊರೆಯಾಗಿ 3 ಸಾವಿರ ಡಾಲರ್ (ಸುಮಾರು 2.7 ಲಕ್ಷ ರೂ.) ಪ್ರೋತ್ಸಾಹಧನ ನೀಡಲಾಗುವುದೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.

ಅಕ್ರಮ ವಲಸಿಗರ ಸಾಮೂಹಿಕ ಗಡಿಪಾರು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಅನುಷ್ಠಾನ ವೆಚ್ಚಗಳನ್ನು ಕಡಿತಗೊಳಿಸುವ ಪ್ರಯತ್ನವಾಗಿ ಟ್ರಂಪ್ ಈ ಉಡುಗೊರೆ ಘೋಷಿಸಿದ್ದಾರೆ. ವರ್ಷಾಂತ್ಯದೊಳಗೆ ಅಮೆರಿಕ ತೊರೆಯಲು ಒಪ್ಪಿಕೊಳ್ಳುವ ಅಕ್ರಮ ವಲಸಿಗರು, ಅವರ ತಾಯ್ನಾಡಿಗೆ ಉಚಿತ ವಿಮಾನಯಾನದ ಜೊತೆಗೆ 3 ಸಾವಿರ ರೂ.ಗಳ ಪ್ರೋತ್ಸಾಹಧನದ ಕೊಡುಗೆಯನ್ನು ಅಮೆರಿಕದ ಗೃಹ ಭದ್ರತಾ ಇಲಾಖೆಯು ಘೋಷಿಸಿದೆ.

ಮೇ ತಿಂಗಳಲ್ಲಿ ಟ್ರಂಪ್ ಸರಕಾರವು ದೇಶವನ್ನು ತೊರೆಯಬಯಸುವ ಅಕ್ರಮ ವಲಸಿಗರಿಗೆ 1 ಸಾವಿರ ಡಾಲರ್‌ ಗಳ ಪರಿಹಾರವನ್ನು ಘೋಷಿಸಿತ್ತು. ಇದೀಗ ಮೊತ್ತವನ್ನು ಅದು ಮೂರು ಪಟ್ಟು ಹೆಚ್ಚಿಸಿದೆ.

‘‘ಸಿಬಿಪಿ ಹೋಮ್ ಆ್ಯಪ್ ಮೂಲಕ ಸ್ವಯಂ ಗಡಿಪಾರು ಕೋರುವುದು ಅಕ್ರಮ ವಲಸಿಗರು ಅವರಿಗೆ ಹಾಗೂ ಅವರ ಕುಟುಂಬಕ್ಕೆ ನೀಡುವ ಈ ರಜಾಕಾಲದ ಅತಿ ದೊಡ್ಡ ಉಡುಗೊರೆಯಾಗಿದೆ. ಇದೊಂದು ತ್ವರಿತ, ಉಚಿತ ಹಾಗೂ ಸುಲಭದ ಪ್ರಕ್ರಿಯೆಯಾಗಿದೆ. ಸಿಬಿಪಿ ಹೋಮ್ ಆ್ಯಪ್ ಡೌನ್‌ಲೋಡ್ ಮಾಡಿ ನಿಮ್ಮ ಮಾಹಿತಿ ನೀಡಿ. ನಿಮ್ಮ ತಾಯ್ನಾಡಿಗೆ ಮರಳಲು ಪ್ರಯಾಣದ ವ್ಯವಸ್ಥೆ ಹಾಗೂ ಪರಿಹಾರಧನ ಪಾವತಿ ಸೇರಿದಂತೆ ಉಳಿದುದನ್ನು ಆಂತರಿಕ ಭದ್ರತಾ ಇಲಾಖೆ (ಡಿಎಚ್‌ಎಸ್) ನೋಡಿಕೊಳ್ಳುತ್ತದೆ’’ ಎಂದು ಆಂತರಿಕ ಭದ್ರತಾ ಇಲಾಖೆಯ ಹೇಳಿಕೆ ತಿಳಿಸಿದೆ.

ಈವರೆಗೆ 19 ಲಕ್ಷ ಮಂದಿ ಅಕ್ರಮ ವಲಸಿಗರು ಸ್ವಯಂಪ್ರೇರಿತವಾಗಿ ಗಡಿಪಾರುಗೊಂಡಿದ್ದಾರೆ. ಅವರಲ್ಲಿ ಸಾವಿರಾರು ಮಂದಿ ಸಿಬಿಪಿ ಹೋಮ್ ಆ್ಯಪ್ ಬಳಸಿದ್ದಾರೆಂದು ಡಿಎಚ್‌ಎಸ್ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News