ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಹೊಸ ಶಾಂತಿ ಯೋಜನೆ ತಿರಸ್ಕರಿಸಿದ ರಶ್ಯ: ವರದಿ
ಡೊನಾಲ್ಡ್ ಟ್ರಂಪ್ | Photo Credit : PTI
ಮಾಸ್ಕೋ, ಡಿ.22: ಉಕ್ರೇನ್‍ನಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಯೋಜನೆಗೆ ಇತ್ತೀಚಿನ ತಿದ್ದುಪಡಿಯನ್ನು ರಶ್ಯ ತಿರಸ್ಕರಿಸುತ್ತದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿದೇಶಾಂಗ ನೀತಿ ಸಲಹೆಗಾರ ಯೂರಿ ಉಷಕೋವ್ ಸೋಮವಾರ ಹೇಳಿದ್ದಾರೆ.
ಶಾಂತಿ ಯೋಜನೆಯ ಮೂಲ ಆವೃತ್ತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಷಕೋವ್, ಅಮೆರಿಕಾ ರಶ್ಯ ಮತ್ತು ಉಕ್ರೇನ್ ನಡುವೆ ತ್ರಿಪಕ್ಷೀಯ ಮಾತುಕತೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. `ಶಾಂತಿ ಯೋಜನೆಗೆ ಮಾಡಿರಬಹುದಾದ ತಿದ್ದುಪಡಿಯನ್ನು ನಾನು ನೋಡಿಲ್ಲ. ಆದರೆ ಯುರೋಪಿಯನ್ನರು ಮತ್ತು ಉಕ್ರೇನಿಯನ್ನರು ಮಾಡಿರುವ ಅಥವಾ ಮಾಡಲು ಪ್ರಯತ್ನಿಸುತ್ತಿರುವ ಪ್ರಸ್ತಾವನೆಗಳು ಖಂಡಿತವಾಗಿಯೂ ಯೋಜನೆಯನ್ನು ಉತ್ತಮಗೊಳಿಸುವುದಿಲ್ಲ ಮತ್ತು ದೀರ್ಘಾವಧಿಯ ಶಾಂತಿಯನ್ನು ಸಾಧಿಸುವ ಸಾಧ್ಯತೆಗಳನ್ನು ಸುಧಾರಿಸುವುದಿಲ್ಲ' ಎಂದವರು ಹೇಳಿದ್ದಾರೆ.
ಈ ಮಧ್ಯೆ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಂಪೂರ್ಣ ಉಕ್ರೇನ್ ಮತ್ತು ಯುರೋಪ್‍ನ ಭಾಗವನ್ನು(ಈ ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಪ್ರದೇಶ) ವಶಪಡಿಸಿಕೊಳ್ಳಲು ಬಯಸಿದ್ದಾರೆ ಎಂಬ ಅಮೆರಿಕಾ ಗುಪ್ತಚರ ವರದಿಯನ್ನು ರಶ್ಯ ತಳ್ಳಿಹಾಕಿದೆ.
ಇದು ಖಂಡಿತಾ ಸತ್ಯವಲ್ಲ. ಮಾಧ್ಯಮಗಳ ವರದಿ ಎಷ್ಟು ವಿಶ್ವಾಸಾರ್ಹವಾಗಿದೆ ಎಂದು ನಮಗೆ ಖಚಿತವಾಗಿಲ್ಲ. ಆದರೆ ಒಂದು ವೇಳೆ ಈ ವರದಿ ನಿಜವಾಗಿದ್ದರೆ ಅಮೆರಿಕಾದ ಗುಪ್ತಚರ ಮೌಲ್ಯಮಾಪನ ತಪ್ಪಾಗಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ರಶ್ಯ, ಉಕ್ರೇನ್ ಜೊತೆಗಿನ ಮಾತುಕತೆ ರಚನಾತ್ಮಕ: ಅಮೆರಿಕಾ
ಉಕ್ರೇನ್‍ನಲ್ಲಿನ ಯುದ್ದವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಫ್ಲೋರಿಡಾ ರಾಜ್ಯದಲ್ಲಿ ಉಕ್ರೇನ್, ಯುರೋಪ್ ಮತ್ತು ರಶ್ಯದ ನಿಯೋಗದ ಜೊತೆ ನಡೆಸಿದ ಪ್ರತ್ಯೇಕ ಮಾತುಕತೆಗಳು ರಚನಾತ್ಮಕವಾಗಿತ್ತು. ಯೋಜನೆಯ ಮುಂದಿನ ಹಂತಗಳ ಅನುಕ್ರಮಕ್ಕೆ ನಿರ್ದಿಷ್ಟ ಗಮನವನ್ನು ನೀಡಲಾಗಿದೆ ಎಂದು ಅಮೆರಿಕಾದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹೇಳಿದ್ದಾರೆ.
`ಹತ್ಯೆಗಳನ್ನು ನಿಲ್ಲಿಸುವುದು, ಉಕ್ರೇನ್‍ಗೆ ಭದ್ರತೆಯನ್ನು ಖಾತರಿ ಪಡಿಸುವುದು, ಉಕ್ರೇನ್‍ನ ಚೇತರಿಕೆ, ಸ್ಥಿರತೆ ಮತ್ತು ದೀರ್ಘಾವಧಿಯ ಸಮೃದ್ಧಿಗೆ ಪೂರಕ ಪರಿಸ್ಥಿತಿ ಸೃಷ್ಟಿಸುವುದು ನಮ್ಮೆಲ್ಲರ ಪ್ರಮುಖ ಆದ್ಯತೆಯಾಗಿದೆ. ನ್ಯಾಯಯುತ ಮತ್ತು ಸುಸ್ಥಿರ ಶಾಂತಿಯನ್ನು ಸಾಧಿಸಲು ಉಕ್ರೇನ್‍ಗೆ ಪೂರ್ಣ ಹಕ್ಕು ಇದೆ' ಎಂದು ವಿಟ್ಕಾಫ್ ಪ್ರತಿಪಾದಿಸಿದ್ದಾರೆ.
ಸುಮಾರು 4 ವರ್ಷಗಳಿಂದ ಮುಂದುವರಿದಿರುವ ಉಕ್ರೇನ್ ಯುದ್ದವನ್ನು ಕೊನೆಗೊಳಿಸಲು ಟ್ರಂಪ್ ಪ್ರಸ್ತಾಪಿಸಿರುವ 20 ಅಂಶದ ಯೋಜನೆಯ ಬಗ್ಗೆ ಅಮೆರಿಕಾ, ರಶ್ಯ ಮತ್ತು ಉಕ್ರೇನ್ ನಿಯೋಗಗಳ ನಡುವೆ ಸರಣಿ ಸಭೆ ನಡೆಯುತ್ತಿದೆ. ಶನಿವಾರ ರಶ್ಯ ಅಧ್ಯಕ್ಷ ಪುಟಿನ್ ಅವರ ವಿಶೇಷ ಪ್ರತಿನಿಧಿ ಕಿರಿಲ್ ಡಿಮಿಟ್ರಿಯೆವ್ ಅವರೊಂದಿಗೆ ಸಭೆ ನಡೆಸಿದ್ದ ವಿಟ್ಕಾಫ್ ರವಿವಾರ ಉಕ್ರೇನ್‍ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ರುಸ್ತುಮ್ ಉಮೆರೊವ್ ಜೊತೆ ಮಾತುಕತೆ ನಡೆಸಿದ್ದಾರೆ.