ಭಾರತ–ಪಾಕಿಸ್ತಾನ ನಡುವಿನ ಪರಮಾಣು ಯುದ್ಧ ತಡೆದಿದ್ದೇನೆ: ಮತ್ತೆ ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಭವಿಸಬಹುದಾಗಿದ್ದ ಪರಮಾಣು ಯುದ್ಧವನ್ನು ತಾನು ತಡೆದಿದ್ದೇನೆ ಎಂಬ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ. ಈ ಮೂಲಕ ಲಕ್ಷಾಂತರ ಜೀವಗಳು ಉಳಿದಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಫ್ಲೋರಿಡಾದ ಪಾಮ್ ಬೀಚ್‌ನ ಮಾರ್-ಎ-ಲಾಗೊ ಕ್ಲಬ್ ನಲ್ಲಿ ಸೋಮವಾರ ಮಾತನಾಡಿದ ಟ್ರಂಪ್, “ನಾವು ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಭಾವ್ಯ ಪರಮಾಣು ಯುದ್ಧವನ್ನು ನಿಲ್ಲಿಸಿದ್ದೇವೆ. ಪಾಕಿಸ್ತಾನದ ನಾಯಕತ್ವ ಇದಕ್ಕಾಗಿ ನಮ್ಮನ್ನು ಮೆಚ್ಚಿದೆ. ಸುಮಾರು ಒಂದು ಕೋಟಿ ಜೀವಗಳು, ಬಹುಶಃ ಇನ್ನೂ ಹೆಚ್ಚು, ಇದರಿಂದಾಗಿ ಉಳಿದಿವೆ” ಎಂದು ಅವರು ಹೇಳಿದ್ದಾರೆ.
ಈ ವೇಳೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ನೌಕಾಪಡೆ ಕಾರ್ಯದರ್ಶಿ ಜಾನ್ ಫೆಲನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಉಪಸ್ಥಿತರಿದ್ದರು. ಸಂಘರ್ಷದ ತೀವ್ರತೆಯನ್ನು ಉಲ್ಲೇಖಿಸಿದ ಟ್ರಂಪ್, “ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಪರಿಸ್ಥಿತಿ ಮತ್ತೊಂದು ದಿನ ಮುಂದುವರಿದಿದ್ದರೆ ಭಾರೀ ಅನಾಹುತವಾಗುತ್ತಿತ್ತು” ಎಂದು ಹೇಳಿದರು. ರಷ್ಯಾ–ಉಕ್ರೇನ್ ಯುದ್ಧ ಮಾತ್ರ ಇನ್ನೂ ಇತ್ಯರ್ಥವಾಗಿಲ್ಲ ಎಂದೂ ಅವರು ಹೇಳಿದರು.
ಮೇ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ಮಾತುಕತೆಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ‘ಪೂರ್ಣ ಹಾಗೂ ತಕ್ಷಣದ’ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ ನಂತರ, ಈ ವಿಷಯವನ್ನು ಅವರು ಹಲವಾರು ಬಾರಿ ಪುನರುಚ್ಛರಿಸಿದ್ದಾರೆ.
ಆದರೆ ಈ ಸಂಬಂಧ ಭಾರತವು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನೂ ನಿರಂತರವಾಗಿ ನಿರಾಕರಿಸಿದೆ. ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದಕ್ಕೆ ಪ್ರತೀಕಾರವಾಗಿ, ಮೇ 7ರಂದು ಭಾರತವು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ವಿರುದ್ಧ ಆಪರೇಷನ್ ಸಿಂಧೂರ್ ಆರಂಭಿಸಿತ್ತು. ನಾಲ್ಕು ದಿನಗಳ ಕಾಲ ನಡೆದ ತೀವ್ರ ಗಡಿಯಾಚೆಗಿನ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಬಳಿಕ, ಮೇ 10ರಂದು ಎರಡೂ ರಾಷ್ಟ್ರಗಳು ಸಂಘರ್ಷ ಅಂತ್ಯಕ್ಕೆ ಒಪ್ಪಿಕೊಂಡವು.