ನವಿ ಪಿಳ್ಳೈ ಅವರಿಗೆ ನೊಬೆಲ್ | ಐಸಿಸಿಗೆ ಅಮೆರಿಕ ನಿರ್ಬಂಧ
Photo Credit : icc-cpi.int
ವಾಶಿಂಗ್ಟನ್, ಅ.10: ಆರೋಪಿತ ಯುದ್ಧ ಅಪರಾಧಗಳ ವಿಚಾರಣೆ ನಡೆಸುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಅಧಿಕಾರ ವ್ಯಾಪ್ತಿಯ ಕುರಿತ ಸಂಘರ್ಷ ತೀವ್ರಗೊಂಡಿದ್ದು, ಅದರ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಅಮೆರಿಕ ಶುಕ್ರವಾರ ಅದರ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.
ಮಾಜಿ ಐಸಿಸಿ ನ್ಯಾಯಾಧೀಶೆ, ದಕ್ಷಿಣ ಆಫ್ರಿಕಾದ ನವಿ ಪಿಳ್ಳೈ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ಕೆಲವು ಗಂಟೆಗಳ ಬಳಿಕ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಈ ಘೋಷಣೆ ಮಾಡಿದ್ದಾರೆ. ‘ಹೇಗ್‌ನಲ್ಲಿರುವ ಈ ನ್ಯಾಯಾಲಯವು ಅಮೆರಿಕದ ಅಧಿಕಾರಿಗಳನ್ನು ಗುರಿಯಾಗಿಸಿಕೊಳ್ಳುತ್ತಿದೆ ಮತ್ತು ಅಮೆರಿಕದ ಸಾರ್ವಭೌಮತ್ವವನ್ನು ಕುಗ್ಗಿಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ. ‘ಐಸಿಸಿ ತನ್ನ ಬೆದರಿಕೆಗಳನ್ನು ಕೊನೆಗೊಳಿಸಬೇಕು, ಇಲ್ಲದಿದ್ದರೆ ನಾವೇ ಐಸಿಸಿಯನ್ನು ಕೊನೆಗೊಳಿಸುತ್ತೇವೆ’ ಎಂದು ಹೇಳಿದ್ದಾರೆ.