Photo: x.com/CNBC

ಹೊಸದಿಲ್ಲಿ: H-1B ವೀಸಾ ಹೊಂದಿರುವವರು ಹಾಗೂ ವಿದೇಶಿ ತಂತ್ರಜ್ಞಾನ ವೃತ್ತಿಪರರನ್ನು ‘ವಿದೇಶಿ ಒಪ್ಪಂದದ ಆಧಾರದ ಗುಲಾಮರು’ (ಫಾರಿನ್ ಇಂಡೆಂಚರ್ಡ್ ಸರ್ವೆಂಟ್ಸ್) ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕರೆದಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆ ಅತ್ಯಂತ ಅವಮಾನಕಾರಿ ಮತ್ತು ಅನಗತ್ಯ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಖಂಡಿಸಿದೆ.

ಭಾರತದ ಹಲವು ಕಂಪೆನಿಗಳು ಸೇರಿದಂತೆ ಅನೇಕ ತಂತ್ರಜ್ಞಾನ ಕಂಪೆನಿಗಳನ್ನು ಅಮೆರಿಕದ ‘PERM ಗ್ರೀನ್ ಕಾರ್ಡ್’ ಕಾರ್ಯಕ್ರಮದಿಂದ ಅಮಾನತುಗೊಳಿಸುವ ಘೋಷಣೆಯ ಬೆನ್ನಲ್ಲೇ ಭಾರತದ ಈ ಪ್ರತಿಕ್ರಿಯೆ ಬಂದಿದೆ. ಈ ಕ್ರಮದಿಂದ ಈಗಾಗಲೇ ನೀಡಲಾಗಿರುವ H-1B ವೀಸಾಗಳ ಸಿಂಧುತ್ವಕ್ಕೆ ಅಥವಾ ವೀಸಾದಾರರು ಮತ್ತು ಅವರ ಅವಲಂಬಿತರ ಪ್ರಸ್ತುತ ಸ್ಥಿತಿಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೆ, ಅರ್ಹ ಉದ್ಯೋಗಿಗಳಿಗೆ ಶಾಶ್ವತ ನಿವಾಸದ ಸ್ಥಾನಮಾನ ಪಡೆಯುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ಭಾರತ ಸರಕಾರ ತಿಳಿಸಿದೆ.

ಅಮೆರಿಕದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿ ಅವರ ಸ್ಥಾನದಲ್ಲಿ ‘ವಿದೇಶಿ ಒಪ್ಪಂದದ ಗುಲಾಮರನ್ನು’ ನೇಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ವ್ಯಾನ್ಸ್ ಹೇಳಿದ್ದರು. ಅಮೆರಿಕದಲ್ಲಿ ಲಭ್ಯವಿಲ್ಲದ ಅತ್ಯುನ್ನತ ದರ್ಜೆಯ ವಿದೇಶಿ ಪ್ರತಿಭೆಗಳನ್ನು ಮಾತ್ರ ದೇಶಕ್ಕೆ ಕರೆತರಬೇಕು ಎಂಬುದು ಅವರ ವಾದವಾಗಿತ್ತು.

ವಲಸಿಗರ ಕೊಡುಗೆ ನಿರ್ಲಕ್ಷಿಸಬೇಡಿ

ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರು ಉನ್ನತ ಶಿಕ್ಷಣ ಪಡೆದವರಾಗಿದ್ದು, ಅಲ್ಲಿನ ಆರ್ಥಿಕತೆ ಮತ್ತು ನಾವೀನ್ಯತೆಯ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ವ್ಯಾನ್ಸ್ ಅವರ ಹೇಳಿಕೆಗಳು ನಿರ್ಲಕ್ಷಿಸಿವೆ ಎಂದು MEA ಹೇಳಿದೆ.

‘ಅಮೆರಿಕದ ಇತಿಹಾಸವೇ ವಲಸಿಗರ ಹಲವು ತಲೆಮಾರುಗಳಿಂದ ರೂಪುಗೊಂಡಿದೆ. ಅವರ ಶ್ರಮ, ಉದ್ಯಮಶೀಲತೆ ಮತ್ತು ಆವಿಷ್ಕಾರಗಳು ದೇಶದ ಬೆಳವಣಿಗೆ ಹಾಗೂ ಸಮೃದ್ಧಿಗೆ ಕೊಡುಗೆ ನೀಡಿವೆ. ನೋವಿನ ಐತಿಹಾಸಿಕ ಮತ್ತು ವಸಾಹತುಶಾಹಿ ಪರಂಪರೆಯ ಛಾಯೆಯನ್ನು ಹೊಂದಿರುವ ಪರಿಭಾಷೆಯ ಬಳಕೆ ಅತ್ಯಂತ ಅವಮಾನಕಾರಿ’ ಎಂದು ಸಚಿವಾಲಯ ಹೇಳಿದೆ. ಈ ವಿಷಯಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಗಮನಿಸುವುದಾಗಿಯೂ ತಿಳಿಸಿದೆ.

ವ್ಯಾಪಾರ ಮತ್ತು ಸುಂಕಗಳು, ವಲಸೆ ಹಾಗೂ ಪ್ರತಿಭೆಗಳ ಚಲನೆ, ರಷ್ಯಾದೊಂದಿಗಿನ ಭಾರತದ ಸಂಬಂಧ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕದ ಹೆಚ್ಚುತ್ತಿರುವ ನಿಕಟತೆ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತ–ಅಮೆರಿಕ ಸಂಬಂಧಗಳು ಹಿನ್ನಡೆ ಎದುರಿಸಿವೆ. ಈ ಹಿನ್ನೆಲೆಯಲ್ಲಿ ಭಾರತದ ನೇರ ಪ್ರತಿಕ್ರಿಯೆ, ಅಮೆರಿಕದ ಕ್ರಮಗಳ ಬಗ್ಗೆ ಹೊಸದಿಲ್ಲಿ ಅಸಮಾಧಾನ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಪಾಕಿಸ್ತಾನದೊಂದಿಗೆ ಅಮೆರಿಕದ ಹೆಚ್ಚುತ್ತಿರುವ ನಿಕಟ ಸಂಬಂಧವು ಭಾರತ–ಅಮೆರಿಕ ಬಾಂಧವ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಎರಡೂ ದೇಶಗಳಿಗೂ ಪ್ರಯೋಜನ

ಅಮೆರಿಕ ಘೋಷಿಸಿರುವ ಕ್ರಮಗಳು ಉಭಯ ದೇಶಗಳ ಹಂಚಿಕೆಯ ಆಕಾಂಕ್ಷೆಗಳನ್ನು ಮುನ್ನಡೆಸುವುದಿಲ್ಲ ಎಂದೂ MEA ಎಚ್ಚರಿಸಿದೆ.

ಪ್ರತಿಭೆಗಳ ಚಲನೆಯು ಎರಡೂ ದೇಶಗಳ ಆರ್ಥಿಕತೆಗಳಿಗೆ ಮೌಲ್ಯವನ್ನು ಹೆಚ್ಚಿಸುತ್ತದೆ. ಭಾರತೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜತೆಗೆ, ಅತ್ಯಾಧುನಿಕ ಪ್ರತಿಭೆ, ಆವಿಷ್ಕಾರ, ಸಂಶೋಧನೆ, ಉತ್ಪಾದಕತೆ, ಸ್ಪರ್ಧಾತ್ಮಕತೆ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಅಮೆರಿಕದ ಕಂಪೆನಿಗಳಿಗೂ ಇದು ನೆರವಾಗುತ್ತದೆ. ಅಲ್ಲದೆ, ಅಮೆರಿಕದಲ್ಲಿ ಷೇರುದಾರರ ಸಂಪತ್ತಿನ ಸೃಷ್ಟಿಗೂ ಸಹಕಾರಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

‘ಹೀಗಾಗಿ, ಇದು ಎರಡೂ ದೇಶಗಳಿಗೆ ಅಪಾರವಾದ ಪರಸ್ಪರ ಪ್ರಯೋಜನಗಳನ್ನು ಒದಗಿಸುವ ಕ್ಷೇತ್ರವಾಗಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲ ಪಾಲುದಾರರೂ ಈ ವಾಸ್ತವವನ್ನು ಅರ್ಥಮಾಡಿಕೊಂಡು ಗೌರವಿಸುತ್ತಾರೆ ಎಂಬುದು ನಮ್ಮ ನಿರೀಕ್ಷೆ’ ಎಂದು ಭಾರತ ಸರಕಾರ ಹೇಳಿದೆ.

ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಘೋಷಣೆ?

ಮುಂಬರುವ ಮಧ್ಯಂತರ ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಅಮೆರಿಕ ‘ಅಮೆರಿಕ ಫಸ್ಟ್’ ನೀತಿಯನ್ನು ಪ್ರತಿಬಿಂಬಿಸುವ ಈ ಘೋಷಣೆ ಮಾಡಿರಬಹುದು. ಆದರೆ, ಈಗಾಗಲೇ ಸವಾಲುಗಳನ್ನು ಎದುರಿಸುತ್ತಿರುವ ಭಾರತ–ಅಮೆರಿಕ ಸಂಬಂಧಗಳನ್ನು ಸುಧಾರಿಸಲು ಈ ಕ್ರಮ ನೆರವಾಗುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ.

ಡಿಸೆಂಬರ್‌ನಲ್ಲಿ ನಡೆಯಲಿರುವ G20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಈ ಘೋಷಣೆಯ ಸಮಯವೂ ಮಹತ್ವ ಪಡೆದಿದೆ. ಇದು ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ನಕಾರಾತ್ಮಕ ಚಿತ್ರಣ ಮೂಡಿಸಬಹುದು ಎಂಬ ಆತಂಕವಿದೆ.

ಇದೇ ತಿಂಗಳು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ತನ್ನ ಕಳವಳಗಳನ್ನು ಅಮೆರಿಕದ ಗಮನಕ್ಕೆ ತರಲು ಭಾರತ ಮುಂದಾಗುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor