ಅಮೆರಿಕಾದ ಶಾಲೆಯಲ್ಲಿ ಶೂಟೌಟ್: ಇಬ್ಬರು ಮಕ್ಕಳು ಮೃತ್ಯು
PC: X
ನ್ಯೂಯಾರ್ಕ್, ಆ.28: ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿನ ಕ್ಯಾಥೊಲಿಕ್ ಶಾಲೆಯಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು 14 ಮಕ್ಕಳ ಸಹಿತ 17 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅನನ್ಷಿಯೇಷನ್ ಕ್ಯಾಥೊಲಿಕ್ ಶಾಲೆಯ ಮಕ್ಕಳು ಚರ್ಚ್ ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ಶಂಕಿತ ಆರೋಪಿ ರಾಬಿನ್ ವೆಸ್ಟ್ ಮನ್ ಎಂಬಾತ ಚರ್ಚ್ ನ ಕಿಟಕಿಯ ಮೂಲಕ ಗುಂಡು ಹಾರಿಸಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇತರ 17 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದು ಬಳಿಕ ವೆಸ್ಟ್ ಮನ್ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮುಖ್ಯಸ್ಥ ಬ್ರಿಯಾನ್ ಒ'ಹಾರ ಹೇಳಿದ್ದಾರೆ.
ಶಂಕಿತ ಆರೋಪಿಯ ಬಳಿ ರೈಫಲ್, ಬಂದೂಕು ಮತ್ತು ಪಿಸ್ತೂಲ್ ಇತ್ತು. ಬಂದೂಕಿನಲ್ಲಿ `ಭಾರತವನ್ನು ನಾಶಗೊಳಿಸಿ' , `ಟ್ರಂಪ್ ರನ್ನು ಕೊಲ್ಲಿ', `ಇಸ್ರೇಲನ್ನು ಸುಟ್ಟುಹಾಕಿ' ಎಂದು ಬರೆದಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗುಂಡಿನ ದಾಳಿಯನ್ನು ಖಂಡಿಸಿರುವ ಅಧ್ಯಕ್ಷ ಟ್ರಂಪ್ `ಸಂತ್ರಸ್ತರಿಗೆ ಗೌರವದ ಸಂಕೇತವಾಗಿ ಸಂಜೆಯವರೆಗೆ ಎಲ್ಲಾ ಸಾರ್ವಜನಿಕ ಕಟ್ಟಡಗಳು ಹಾಗೂ ಶ್ವೇತಭವನದಲ್ಲಿ ಅಮೆರಿಕದ ಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವಂತೆ' ಸೂಚಿಸಿದ್ದಾರೆ.