ಡ್ರೋನ್ ನಿರೋಧಕ ವ್ಯವಸ್ಥೆ; ಉಕ್ರೇನ್-EU ಡ್ರೋನ್ ಒಪ್ಪಂದ
Photo Credit: pravda
ಕೀವ್, ಜು.15: ಜಂಟಿ ಉತ್ಪಾದನೆಯನ್ನು ಉತ್ತೇಜಿಸಲು ಉಕ್ರೇನ್ ನೊಂದಿಗೆ ಡ್ರೋನ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ಉಕ್ರೇನ್‌ನ ಜಾಣ್ಮೆ ಮತ್ತು ಯುರೋಪಿನ ಕೈಗಾರಿಕಾ ಸಾಮರ್ಥ್ಯವನ್ನು ಒಟ್ಟಿಗೆ ತರಲಿದೆ ಎಂದು EU (ಯುರೋಪಿಯನ್ ಯೂನಿಯನ್) ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯನ್ ಬುಧವಾರ ಘೋಷಿಸಿದ್ದಾರೆ.
ರಷ್ಯಾದೊಂದಿಗಿನ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದ ಯುದ್ಧದ ಸಂದರ್ಭದಲ್ಲಿ ಉಕ್ರೇನ್ ಗಳಿಸಿರುವ ಪರಿಣತಿಯ ಪ್ರಯೋಜನ ಪಡೆಯಲು ಬಯಸಿರುವ ಕೆಲವು EU ದೇಶಗಳು ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ ಉಕ್ರೇನ್ ಈಗಾಗಲೇ ಇಂತಹದೇ ಒಪ್ಪಂದಗಳಿಗೆ ಸಹಿ ಹಾಕಿದೆ.
'ಡ್ರೋನ್ ಮತ್ತು ಡ್ರೋನ್ ನಿರೋಧಕ ವ್ಯವಸ್ಥೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಉಕ್ರೇನ್ ಗಳಿಸಿರುವ ಜ್ಞಾನವು ನಿಜವಾಗಿಯೂ ಅನನ್ಯವಾಗಿದೆ. ನಾವು ಒಟ್ಟಾಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು, ಏಕೆಂದರೆ ಈ ವಲಯದಲ್ಲಿ ಯುರೋಪ್ ಎದುರಿಸುತ್ತಿರುವ ಭೀತಿಗಳ ಬಗ್ಗೆ ನಮಗೆ ಅರಿವಿದೆ' ಎಂದು ವಾನ್ ಡೆರ್ ಲೇಯನ್ ಹೇಳಿದ್ದಾರೆ.