×
Ad

USA | ಧರ್ಮಾಧಾರಿತ ದ್ವೇಷಾಪರಾಧ: ಭಾರತೀಯ ಯುವಕನಿಗೆ ಚಾಕು ಇರಿತ

Update: 2026-07-15 23:42 IST

Photo: gofundme.com

ನ್ಯೂಯಾರ್ಕ್, ಜು. 15: ಅಮೆರಿಕದ ಉತಾಹ್ ರಾಜ್ಯದ ಶಾಪಿಂಗ್ ಮಾಲ್ ಒಂದರಲ್ಲಿ ಭಾರತೀಯ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ 15 ಬಾರಿ ಚಾಕು ಇರಿಯಲಾಗಿದ್ದು, ಅಧಿಕಾರಿಗಳು ಇದನ್ನು ಧರ್ಮ ಆಧಾರಿತ ದ್ವೇಷದ ಅಪರಾಧ ಎಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿ 48 ವರ್ಷದ ಪೀಟರ್ ಮೈಕೇಲ್ ಲಾರ್ಸನ್, ‘ಆತ ಮುಸ್ಲಿಂ ಎಂಬ ಕಾರಣಕ್ಕೆ ತಾನು ದಾಳಿ ನಡೆಸಿದ್ದು, ತನಗೆ ಮುಸ್ಲಿಮರನ್ನು ಕೊಲ್ಲುವ ಉದ್ದೇಶವಿದೆ’ ಎಂದು ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ವೆಸ್ಟ್ ವ್ಯಾಲಿ ಸಿಟಿಯ ‘ವ್ಯಾಲಿ ಫೇರ್ ಮಾಲ್’ಗೆ ಆಗಮಿಸಿದ್ದ ಲಾರ್ಸನ್, ಮಾಲ್‌ ನ ಸಿಬ್ಬಂದಿ ಸೊಹೈಲ್‌ನೊಂದಿಗೆ ಮಾತನಾಡುತ್ತಾ ಆತನ ಧರ್ಮದ ಬಗ್ಗೆ ಕೇಳಿದ್ದಾನೆ. ಸೊಹೈಲ್, ‘ನಾನು ಭಾರತದವನು, ನಾನು ಮುಸ್ಲಿಂ’ ಎಂದು ಉತ್ತರಿಸಿದ್ದರು. ಬಳಿಕ ಲಾರ್ಸನ್ ನೀರಿನ ಬಾಟಲಿ ಕೇಳಿದ್ದಾನೆ. ಸೊಹೈಲ್ ನೀರು ತರಲು ತಿರುಗಿದ ತಕ್ಷಣ, ಆರೋಪಿ ಚಾಕುವಿನಿಂದ ಆತನ ಮೇಲೆ ದಾಳಿ ನಡೆಸಿ ಹಲವು ಬಾರಿ ಇರಿದಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಮಾಲ್‌ ನಲ್ಲಿದ್ದ ಜನರು ಲಾರ್ಸನ್‌ನನ್ನು ತಡೆದು ನೆಲಕ್ಕೆ ತಳ್ಳಿದ್ದಾರೆ ಎಂದು ‘ದಿ ಸಾಲ್ಟ್ ಲೇಕ್ ಟ್ರಿಬ್ಯೂನ್’ ವರದಿ ಮಾಡಿದೆ.

ದಾಳಿಯಿಂದಾಗಿ ಸೊಹೈಲ್ ಅವರ ದೇಹದ ಮೇಲೆ ಸುಮಾರು 15 ಚಾಕು ಇರಿತದ ಗಾಯಗಳಾಗಿದ್ದು, ಅವರಿಗೆ ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಅವರು ಇನ್ನೂ ಆಸ್ಪತ್ರೆಯಲ್ಲೇ ಇದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸೊಹೈಲ್ ತಮ್ಮ ಕುಟುಂಬದ ಏಕೈಕ ಸಂಪಾದಿಸುವ ವ್ಯಕ್ತಿಯಾಗಿದ್ದು, ಅವರಿಗೆ ಯಾವುದೇ ವೈದ್ಯಕೀಯ ವಿಮೆ ಇಲ್ಲ ಎಂದು ಅವರ ಸ್ನೇಹಿತೆ ತಿಳಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News