×
Ad

ಅಮೆರಿಕ: ಸುಪಾರಿ ಹತ್ಯೆಯ ಸಂಚು, ಇರಾನ್ ಪ್ರಜೆ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

Update: 2024-01-30 22:40 IST

ವಾಷಿಂಗ್ಟನ್ : ಇರಾನ್ನಿಂದ ಅಮೆರಿಕಕ್ಕೆ ಪಲಾಯನ ಮಾಡಿದ್ದ ವ್ಯಕ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಅಮೆರಿಕದಲ್ಲಿ ಹತ್ಯೆ ಮಾಡಲು ಸುಪಾರಿ ಪಡೆದಿದ್ದ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಅಮೆರಿಕದ ನ್ಯಾಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳಲ್ಲಿ ಓರ್ವ ಇರಾನ್ ಪ್ರಜೆಯಾಗಿದ್ದರೆ ಉಳಿದ ಇಬ್ಬರು ಕೆನಡಾ ಪ್ರಜೆಗಳು. ತಮ್ಮ ದೇಶದಿಂದ ಅಮೆರಿಕಕ್ಕೆ ಸ್ಥಳಾಂತರಗೊಂಡಿರುವ ಭಿನ್ನಮತೀಯರು ಅಥವಾ ಮಾನವ ಹಕ್ಕು ಕಾರ್ಯಕರ್ತರನ್ನು ಗುರಿಯಾಗಿಸಿ ಈ ತಂಡ ಕಾರ್ಯನಿರ್ವಹಿಸುತ್ತಿತ್ತು. ಮೇರಿಲ್ಯಾಂಡ್ ರಾಜ್ಯದ ಇಬ್ಬರು ನಿವಾಸಿಗಳನ್ನು ಹತ್ಯೆ ಮಾಡುವ ಸುಪಾರಿ ಪಡೆದಿದ್ದ ಇರಾನ್ ಪ್ರಜೆ ಷರೀಫ್ ಝಿಂದಾಷ್ಟಿ ಈ ಕಾರ್ಯಕ್ಕೆ 2020ರ ಡಿಸೆಂಬರ್ ನಿಂದ 2021ರ ಮಾರ್ಚ್ ಅವಧಿಯಲ್ಲಿ ಇಬ್ಬರು ಕೆನಡಿಯನ್ನರನ್ನು ಸಹಾಯಕರನ್ನಾಗಿ ನೇಮಿಸಿಕೊಂಡಿದ್ದ. ಆದರೆ ಸಂಚನ್ನು ವಿಫಲಗೊಳಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಸೋಮವಾರ ಬೆಳಕಿಗೆ ಬಂದ ಪ್ರಕರಣವು ಬಹುರಾಷ್ಟ್ರೀಯ ದಮನದ ಪ್ರವೃತ್ತಿಯ ಭಾಗವಾಗಿದೆ. ಇದರಲ್ಲಿ ಇರಾನ್, ಚೀನಾ ಮುಂತಾದ ದೇಶಗಳ ಕಾರ್ಯಕರ್ತರು ತಮ್ಮ ದೇಶದಿಂದ ನಿಷ್ಟೆ ಬದಲಿಸಿದವರನ್ನು ಗುರುತಿಸಿ ಅವರ ವಿರುದ್ಧ ಕಿರುಕುಳ, ಬೆದರಿಕೆ, ಮಾನಸಿಕ ಒತ್ತಡ ಮತ್ತು ಹಿಂಸೆಯ ಅಭಿಯಾನ ಜರಗಿಸುತ್ತಾರೆ. `ಅಮೆರಿಕದ ನೆಲದಲ್ಲಿ ಸುಪಾರಿ ಹತ್ಯೆಯ ಸಂಚು ರೂಪಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸುವುದು ಸುಲಭವಲ್ಲ ಎಂಬ ಸಂದೇಶವನ್ನು ಕ್ರಿಮಿನಲ್ಗಳಿಗೆ ನೀಡಬಯಸುತ್ತೇವೆ' ಎಂದು ನ್ಯಾಯಾಂಗ ಇಲಾಖೆಯ ಉನ್ನತ ಅಧಿಕಾರಿ ಮ್ಯಾಥ್ಯೂ ಓಲ್ಸನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News