ನಾವು ಮಧ್ಯಪ್ರಾಚ್ಯದ ಭವಿಷ್ಯವನ್ನೇ ಬದಲಾಯಿಸಿದ್ದೇವೆ: ನೆತನ್ಯಾಹು
ಬೆಂಜಮಿನ್ ನೆತನ್ಯಾಹು | Photo Credit : PTI
ಟೆಲ್ ಅವೀವ್, ಅ. 28: 'ಲಿಕುಡ್' ಪಕ್ಷವು ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ತಮ್ಮ ಸರಕಾರದ ಮಿಲಿಟರಿ ಕಾರ್ಯಾಚರಣೆಗಳು ಮಧ್ಯಪ್ರಾಚ್ಯದ ಸ್ವರೂಪವನ್ನೇ ಬದಲಾಯಿಸಿವೆ ಎಂದು ಹೇಳಿರುವ ಅವರು, ಪ್ರಬಲ ಬಲಪಂಥೀಯ ಸರಕಾರ ರಚಿಸುವಂತೆ ಕರೆ ನೀಡಿದ್ದಾರೆ.
ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು, ಹಮಾಸ್, ಹಿಜ್ಬುಲ್ಲಾ ಮತ್ತು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳು ಇಸ್ರೇಲ್ನ ಭದ್ರತೆಯನ್ನು ಬಲಪಡಿಸಿವೆ ಎಂದು ಹೇಳಿದ್ದಾರೆ. ಆದರೆ, ಇರಾನ್ನಲ್ಲಿ ಈಗಿನ ಆಡಳಿತ ಅಧಿಕಾರದಲ್ಲಿರುವವರೆಗೆ ಅಲ್ಲಿಂದ ಎದುರಾಗುವ ಬೆದರಿಕೆ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಬಲಪಂಥೀಯ ಮೈತ್ರಿಕೂಟವು ನಿರ್ಣಾಯಕ ಬಹುಮತ ಪಡೆದಿದೆ ಎಂದು ಪ್ರತಿಪಾದಿಸಿದ ಅವರು, ಮೈತ್ರಿಕೂಟದ ಹಿಂದೆ ಒಂದಾಗುವಂತೆ ರಾಷ್ಟ್ರವಾದಿ ಪಕ್ಷಗಳಿಗೆ ಆಗ್ರಹಿಸಿದ್ದಾರೆ. ಅರಬ್ ನೇತೃತ್ವದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಯೋಚಿಸುತ್ತಿರುವ ವಿರೋಧ ಪಕ್ಷಗಳ ನಾಯಕರನ್ನು ನೆತನ್ಯಾಹು ಟೀಕಿಸಿದ್ದಾರೆ. ಇಂತಹ ಸರಕಾರವು ಇಸ್ರೇಲ್ನ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಲಿದೆ ಎಂದು ಅವರು ವಾದಿಸಿದ್ದಾರೆ.