Israelʼs election | ಅರಬ್ ಪಕ್ಷಗಳು ಚುನಾವಣೆ ಕದ್ದಿವೆ: ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದ ಆರೋಪ
Photo Credit : AP
ಟೆಲ್ ಅವೀವ್: ಅರಬ್ ನೇತೃತ್ವದ ಪಕ್ಷಗಳು ಗಂಭೀರ ಅಪರಾಧ ಕೃತ್ಯಗಳ ಮೂಲಕ ಚುನಾವಣೆಯನ್ನು ಕದ್ದಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಆರೋಪಿಸಿದೆ ಎಂದು Aljazeera ವರದಿ ಮಾಡಿದೆ.
ಇಸ್ರೇಲಿ ಮಾಧ್ಯಮಗಳು ವರದಿ ಮಾಡಿರುವ ಹೇಳಿಕೆಯಲ್ಲಿ, ‘ಭಯೋತ್ಪಾದನೆ ಮತ್ತು ಯಹೂದಿ ರಾಷ್ಟ್ರದ ವಿನಾಶವನ್ನು ಬೆಂಬಲಿಸುವ ಅರಬ್ ಪಕ್ಷಗಳು ಚುನಾವಣೆಯನ್ನು ಕದ್ದಿವೆ’ ಎಂದು ಲಿಕುಡ್ ದೂರಿದೆ.
ಅರಬ್ ನೇತೃತ್ವದ ಪಕ್ಷಗಳು ಚುನಾವಣೆಯಲ್ಲಿ ಅಕ್ರಮ ಎಸಗಿವೆ ಎಂದು ಆರೋಪಿಸಿರುವ ಲಿಕುಡ್, ಮತದಾರರನ್ನು ಒಗ್ಗೂಡಿಸಲು ನಿಷೇಧಿತ ತಂತ್ರಗಳನ್ನು ಬಳಸಿಕೊಂಡಿವೆ. ಮತದಾರರಿಗೆ ಲಂಚ ನೀಡುವುದು, ಬೆದರಿಕೆ ಹಾಕುವುದು, ಹಿಂಸಾಚಾರ ನಡೆಸುವುದು ಮತ್ತು ದಾಖಲೆಗಳನ್ನು ನಕಲಿ ಮಾಡುವುದು ಸೇರಿದಂತೆ ಹಲವು ಅಕ್ರಮಗಳಲ್ಲಿ ಅವು ತೊಡಗಿವೆ ಎಂಬುದು ಲಿಕುಡ್ ಪಕ್ಷ ಹೇಳಿದೆ.
ಈ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಇಸ್ರೇಲ್ ನ ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್ ಮತ್ತು ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಿರುವುದಾಗಿ ತಿಳಿಸಿದೆ. ಆದರೆ, ಆರೋಪಗಳಿಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳನ್ನು ಲಿಕುಡ್ ಬಹಿರಂಗಪಡಿಸಿಲ್ಲ.
ಚುನಾವಣಾ ಪ್ರಚಾರದ ಉದ್ದಕ್ಕೂ ಲಿಕುಡ್ ಪಕ್ಷವು ಅರಬ್ ಪಕ್ಷಗಳ ವಿರುದ್ಧ ಪದೇಪದೇ ವಾಗ್ದಾಳಿ ನಡೆಸಿತ್ತು. ಮತದಾನದ ದಿನದಂದು ಅರಬ್ ನೇತೃತ್ವದ ಪಕ್ಷಗಳ ಪ್ರಮುಖ ರಾಜಕಾರಣಿಗಳು, ನೆತನ್ಯಾಹು ಅವರು ಇಸ್ರೇಲ್ ನ ಫೆಲೆಸ್ತೀನಿನ ನಾಗರಿಕರ ವಿರುದ್ಧ ದ್ವೇಷ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಲಪಂಥೀಯ ಮತದಾರರನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ತಮ್ಮ ಪಕ್ಷದ ಅವಕಾಶಗಳನ್ನು ಉತ್ತಮಪಡಿಸಿಕೊಳ್ಳಲು ಅವರು ‘ಭಯ ಹುಟ್ಟಿಸುವ ತಂತ್ರ’ ಅನುಸರಿಸುತ್ತಿದ್ದಾರೆ ಎಂದು ದೂರಿದ್ದರು.
ಲಿಕುಡ್ ಆರೋಪಗಳ ಕುರಿತು ಅರಬ್ ನೇತೃತ್ವದ ಪಕ್ಷಗಳಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.