ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಲಾ ವಿರುದ್ಧ ಸೋಲು: ಬ್ರೆಝಿಲ್ ನಿಂದ ಅಮೆರಿಕಕ್ಕೆ ಪಲಾಯನ ಮಾಡಿದ ಫ್ಲೇವಿಯೊ ಬೋಲ್ಸನಾರೊ
ಪಾಸ್ಪೋರ್ಟ್ ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ಪಲಾಯನ: ಬೋಲ್ಸನಾರೊ ಕುಟುಂಬಕ್ಕೆ ವೀಸಾ ನೀಡಲು ವಾಷಿಂಗ್ಟನ್ ಸಿದ್ಧತೆ
Photo: Business Today
ಬ್ರೆಸಿಲಿಯಾ: ಬ್ರೆಝಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಲಾ ವಿರುದ್ಧ ಸೋತ ಬೆನ್ನಲ್ಲೇ ಸೆನೆಟರ್ ಫ್ಲೇವಿಯೊ ಬೋಲ್ಸನಾರೊ ಅಮೆರಿಕಕ್ಕೆ ಪಲಾಯನ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಾಸ್ಪೋರ್ಟ್ಗಳನ್ನು ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಅದನ್ನು ಪಾಲಿಸದೆ ಅವರು ದೇಶ ತೊರೆದಿದ್ದಾರೆ. ಈ ನಡುವೆ, ಬೋಲ್ಸನಾರೊ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಮೆರಿಕ ಪ್ರವೇಶ ವೀಸಾಗಳನ್ನು ನೀಡಲು ವಾಷಿಂಗ್ಟನ್ ಸಿದ್ಧವಾಗಿದೆ.
ಬೋಲ್ಸನಾರೊ ದೇಶ ತೊರೆದಿರುವ ವಿಷಯ ನಮಗೆ ತಿಳಿದಿದೆ ಎಂದು ಬ್ರೆಝಿಲ್ ಅಧ್ಯಕ್ಷ ಲೂಲಾ ಹೇಳಿದ್ದಾರೆ. ಈ ಬೆಳವಣಿಗೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ ಅವರು, ಸೆನೆಟರ್ ದೇಶದಲ್ಲಿಯೇ ಉಳಿದು ತಮ್ಮ ನಿರಪರಾಧಿತನ ಸಾಬೀತುಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಲಾ ವಿರುದ್ಧ ಸೋತಿದ್ದರೂ, ಬೋಲ್ಸನಾರೊ ಅಧಿಕೃತವಾಗಿ ಸೋಲನ್ನು ಒಪ್ಪಿಕೊಂಡಿಲ್ಲ. ಮತದಾನದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಅವರು, ಫಲಿತಾಂಶವನ್ನು ರದ್ದುಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದರು. ಆದರೆ, ಅವರ ಲಿಬರಲ್ ಪಕ್ಷವು ಸೋಮವಾರ ಲೂಲಾ ಅವರ ಗೆಲುವನ್ನು ಒಪ್ಪಿಕೊಂಡಿದೆ.
ಅಮೆರಿಕ ಪ್ರವೇಶಕ್ಕೆ ವೀಸಾ
“ಸ್ಟೇಟ್ ಡಿಪಾರ್ಟ್ಮೆಂಟ್ ಫ್ಲೇವಿಯೊ ಬೋಲ್ಸನಾರೊ ಮತ್ತು ಅವರ ಕುಟುಂಬದ ಸದಸ್ಯರಿಗೆ ವೀಸಾಗಳನ್ನು ನೀಡಲಿದ್ದು, ಅಮೆರಿಕ ಪ್ರವೇಶಿಸಲು ಅವಕಾಶ ಕಲ್ಪಿಸಲಿದೆ” ಎಂದು ಅಮೆರಿಕದ ಹಿರಿಯ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೋಲ್ಸನಾರೊ ಫ್ಲೋರಿಡಾಕ್ಕೆ ಬಂದಿಳಿದಿದ್ದಾರೆ ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಅವರು ಮಿಯಾಮಿಯಲ್ಲಿದ್ದಾರೆ ಎಂದು BBC ವರದಿ ಮಾಡಿದೆ. ಅವರ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಎಲ್ಲಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಪಾಸ್ಪೋರ್ಟ್ ಗಳನ್ನು ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಬೋಲ್ಸನಾರೊ ಅವರಿಗೆ ಸೋಮವಾರ 24 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಗಡುವು ಮುಗಿದ ಬಳಿಕ ಅವರ ಪ್ರಯಾಣ ದಾಖಲೆಗಳನ್ನು ರದ್ದುಗೊಳಿಸಲಾಗಿದೆ ಎಂದು ಎರಡು ಮೂಲಗಳು ತಿಳಿಸಿವೆ. ಅವರು ದೇಶದಿಂದ ಪಲಾಯನ ಮಾಡುವ ಅಪಾಯವಿದೆ ಮತ್ತು ಅವರ ಬಳಿ “ಗಣನೀಯ ಪ್ರಮಾಣದ ಆರ್ಥಿಕ ಸಂಪನ್ಮೂಲಗಳಿವೆ” ಎಂಬುದನ್ನು ಉಲ್ಲೇಖಿಸಿ, ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿತ್ತು.
ಬೋಲ್ಸನಾರೊ ಯಾವುದೇ ನಿಯಮಿತ ವಲಸೆ ತಪಾಸಣಾ ಕೇಂದ್ರದ ಮೂಲಕ ಬ್ರೆಝಿಲ್ ತೊರೆದಿಲ್ಲ ಎಂದು ಹಿರಿಯ ಫೆಡರಲ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಬೋಲ್ಸನಾರೊ ಹೇಳಿದ್ದಾರೆ. ಅವರ ನಿರ್ಗಮನದ ಸಂದರ್ಭಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬೆಳವಣಿಗೆಯಿಂದ ಬ್ರೆಝಿಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ.
‘ದೇಶ ತೊರೆಯುವ ಬಗ್ಗೆ ಯೋಚಿಸಿಲ್ಲ’
ತಾವು ದೇಶ ತೊರೆಯುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಸೆನೆಟರ್ ಸೋಮವಾರ ಹೇಳಿದ್ದರು. “ನಾನು ದೇಶ ತೊರೆಯುವ ಬಗ್ಗೆ ಎಂದಿಗೂ ಯೋಚಿಸಿಲ್ಲ” ಎಂದು ಹೇಳಿದ್ದ ಅವರು, ತಮ್ಮ ಪಾಸ್ಪೋರ್ಟ್ ಗಳನ್ನು ಒಪ್ಪಿಸಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದ್ದರು.
ಬೋಲ್ಸನಾರೊ ದೇಶ ತೊರೆದಿರುವುದು ಅವರ ಚುನಾವಣಾ ಪ್ರಚಾರದ ವ್ಯವಸ್ಥಾಪಕರಾಗಿದ್ದ ಸೆನೆಟರ್ ರೊಜೇರಿಯೊ ಮರಿನ್ಹೋ ಅವರಿಗೂ ಅಚ್ಚರಿ ಮೂಡಿಸಿದಂತಿದೆ. ಚುನಾವಣೆಯಲ್ಲಿ 6 ಕೋಟಿ ಮತಗಳನ್ನು ಪಡೆದ ಬಳಿಕ ಬೋಲ್ಸನಾರೊ ವಿರೋಧ ಪಕ್ಷದ ನಾಯಕನ ಪಾತ್ರ ವಹಿಸಿಕೊಳ್ಳುವ ಕುರಿತು ಪ್ರಚಾರ ತಂಡದಲ್ಲಿ ಚರ್ಚೆ ನಡೆದಿತ್ತು ಎಂದು ಮರಿನ್ಹೋ ಹೇಳಿದ್ದಾರೆ.
ತಂದೆಯ ಹಾದಿಯಲ್ಲೇ ಪುತ್ರ
ಫ್ಲೇವಿಯೊ ಬೋಲ್ಸನಾರೊ ಅವರ ನಿರ್ಗಮನವು ಅವರ ತಂದೆ ಹಾಗೂ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅನುಸರಿಸಿದ್ದ ಹಾದಿಯನ್ನು ಹೋಲುತ್ತದೆ. ಜೈರ್ ಬೋಲ್ಸನಾರೊ ಅವರು 2022ರ ಚುನಾವಣೆಯಲ್ಲಿ ಸೋತ ಬಳಿಕ ಅಮೆರಿಕಕ್ಕೆ ತೆರಳಿದ್ದರು. ಬಳಿಕ ಬ್ರೆಝಿಲ್ಗೆ ಮರಳಿದ್ದರು. ದಂಗೆಯ ಸಂಚು ರೂಪಿಸಿದ ಆರೋಪದಲ್ಲಿ ಅವರಿಗೆ 27 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.