ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಬಳಿಕ ಭಾರತ–ಪಾಕಿಸ್ತಾನ ಸಂಬಂಧದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ, ಪಾಕಿಸ್ತಾನದ ಹಿರಿಯ ಸಚಿವರೊಬ್ಬರಿಗೆ ಭಾರತ ಆಹ್ವಾನ ನೀಡಿದೆ.

ನವೆಂಬರ್ 20ರಿಂದ 22ರವರೆಗೆ ದಿಲ್ಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ (SCO) ಮೊದಲ ನಾಗರಿಕ ಸಂವಾದ ವೇದಿಕೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚಿ ಅವರನ್ನು ಆಹ್ವಾನಿಸಲಾಗಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

SCOಯ ಎಲ್ಲ 10 ಸದಸ್ಯ ರಾಷ್ಟ್ರಗಳಿಗೂ ಭಾರತ ಆಹ್ವಾನ ನೀಡಿದೆ. 2025ರ ಮೇ ತಿಂಗಳಲ್ಲಿ ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಪಾಕಿಸ್ತಾನದ ಹಿರಿಯ ಸಚಿವರೊಬ್ಬರಿಗೆ ಭಾರತ ನೀಡಿರುವ ಮೊದಲ ಆಹ್ವಾನ ಇದಾಗಿದೆ.

2023ರ ಬಳಿಕ ಮೊದಲ ಭೇಟಿ ಸಾಧ್ಯತೆ

ಖಿಚಿ ಅವರು ಆಹ್ವಾನ ಸ್ವೀಕರಿಸಿ ಭಾರತಕ್ಕೆ ಭೇಟಿ ನೀಡಿದರೆ, 2023ರ ಮೇ ತಿಂಗಳ ಬಳಿಕ ಪಾಕಿಸ್ತಾನದ ಹಿರಿಯ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದಂತಾಗಲಿದೆ. ಗೋವಾದಲ್ಲಿ ನಡೆದ SCO ವಿದೇಶಾಂಗ ಸಚಿವರ ಮಂಡಳಿಯ ಸಭೆಯಲ್ಲಿ ಅಂದಿನ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಭಾಗವಹಿಸಿದ್ದರು.

ಭಯೋತ್ಪಾದನೆ ವಿರುದ್ಧ ರಾಜನಾಥ್ ಸಿಂಗ್ ಕರೆ

ಅಕ್ಟೋಬರ್ 20ರಂದು ತಜಿಕಿಸ್ತಾನದ ದುಶಾನ್ಬೆಯಲ್ಲಿ ನಡೆದ SCO ಸರಕಾರದ ಮುಖ್ಯಸ್ಥರ ಮಂಡಳಿಯ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಗರಿಕ ಸಂವಾದ ವೇದಿಕೆಯ ಆಯೋಜನೆಯನ್ನು ಘೋಷಿಸಿದ್ದರು.

‘ಈ ವರ್ಷದ ಕೊನೆಯಲ್ಲಿ ಭಾರತವು ಮೊದಲ SCO ನಾಗರಿಕ ಸಂವಾದ ವೇದಿಕೆಯನ್ನು ಆಯೋಜಿಸಲಿದೆ. ಇದರಲ್ಲಿ ಭಾಗವಹಿಸಲು ಎಲ್ಲ SCO ದೇಶಗಳಿಗೂ ಆಹ್ವಾನ ನೀಡುತ್ತೇವೆ’ ಎಂದು ಅವರು ತಿಳಿಸಿದ್ದರು.

ಸದಸ್ಯ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದು ಮತ್ತು ಪರಸ್ಪರ ತಿಳುವಳಿಕೆಯನ್ನು ವೃದ್ಧಿಸುವುದು ಈ ವೇದಿಕೆಯ ಉದ್ದೇಶವಾಗಿದೆ.

ಇದೇ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ದೃಢವಾದ ಮತ್ತು ನಿರಂತರ ಕ್ರಮ ಕೈಗೊಳ್ಳುವಂತೆ ರಾಜನಾಥ್ ಸಿಂಗ್ ಕರೆ ನೀಡಿದ್ದರು. ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ದ್ವಿಮುಖ ಮಾನದಂಡಗಳಿಗೆ ಅವಕಾಶ ಇರಬಾರದು ಎಂದು ಅವರು ಪ್ರತಿಪಾದಿಸಿದ್ದರು.

‘ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವವರು, ಬೆಂಬಲಿಸುವವರು ಅಥವಾ ಸುರಕ್ಷಿತ ಆಶ್ರಯ ಒದಗಿಸುವವರಿಗೆ ಅವಕಾಶವಿರಬಾರದು. ಭಯೋತ್ಪಾದನೆಯ ಸಂಪೂರ್ಣ ವ್ಯವಸ್ಥೆಯನ್ನು ದೃಢವಾಗಿ ಮತ್ತು ಸಾಮೂಹಿಕವಾಗಿ ನಾಶಪಡಿಸಬೇಕು’ ಎಂದು ಅವರು ಹೇಳಿದ್ದರು. ಸಭೆಯಲ್ಲಿ ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ ಕೂಡ ಭಾಗವಹಿಸಿದ್ದರು.

SCO ಅಧ್ಯಕ್ಷತೆ ಪಾಕಿಸ್ತಾನದ ಹೊಣೆ

ಸೆಪ್ಟೆಂಬರ್ 1ರಂದು ಬಿಷ್ಕೆಕ್‌ನಲ್ಲಿ ನಡೆದ ಶೃಂಗಸಭೆಯ ಬಳಿಕ, 2026–27ರ ಅವಧಿಗೆ SCO ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ಸರದಿಯಂತೆ ಅಧ್ಯಕ್ಷತೆಯನ್ನು ಪಾಕಿಸ್ತಾನವು ಕಿರ್ಗಿಸ್ತಾನದಿಂದ ವಹಿಸಿಕೊಂಡಿದೆ.

ಬೆಲಾರಸ್, ಚೀನಾ, ಭಾರತ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ 10 ರಾಷ್ಟ್ರಗಳು SCOಯ ಸದಸ್ಯ ರಾಷ್ಟ್ರಗಳಾಗಿವೆ. ಭಾರತವು 2017ರಲ್ಲಿ ಈ ಸಂಘಟನೆಯ ಪೂರ್ಣ ಸದಸ್ಯತ್ವ ಪಡೆದಿತ್ತು. ಅಫ್ಘಾನಿಸ್ತಾನ ಮತ್ತು ಮಂಗೋಲಿಯಾಗಳು ವೀಕ್ಷಕ ರಾಷ್ಟ್ರಗಳಾಗಿದ್ದು, 15 ರಾಷ್ಟ್ರಗಳು ಸಂವಾದದಲ್ಲಿ ಪಾಲ್ಗೊಳ್ಳುವ ಸ್ಥಾನಮಾನ ಹೊಂದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor