ಯೆಮನ್ ಬಂದರಿನ ಮೇಲೆ ಅಮೆರಿಕದ ದಾಳಿ: ಕನಿಷ್ಠ 58 ಮಂದಿ ಮೃತ್ಯು
PC : NDTV
ಸನಾ: ಪಶ್ಚಿಮ ಯೆಮನ್‍ನ ಹೊದೈದಾ ಪ್ರಾಂತದಲ್ಲಿರುವ ರಾಸ್ ಇಸಾ ತೈಲ ಬಂದರಿನ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 58 ಮಂದಿ ಸಾವನ್ನಪ್ಪಿದ್ದು ಇತರ 126 ಮಂದಿ ಗಾಯಗೊಂಡಿರುವುದಾಗಿ ಹೌದಿಗಳ ಸ್ವಾಮ್ಯದ ಅಲ್ ಮಸೀರಾ ಟಿವಿ ವರದಿ ಮಾಡಿದೆ.
ಇರಾನ್ ಬೆಂಬಲಿತ ಹೌದಿ ಬಂಡುಕೋರ ಗುಂಪಿನ ಮೇಲೆ ಅಮೆರಿಕದ ದಾಳಿ ಆರಂಭಗೊಂಡ ಬಳಿಕದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ. ಕೆಂಪು ಸಮುದ್ರದ ಬಳಿಯಿರುವ ರಾಸ್ ಇಸಾ ಬಂದರಿನಲ್ಲಿ ಮೂರು ತೈಲ ಟ್ಯಾಂಕ್‍ಗಳು ಮತ್ತು ಒಂದು ತೈಲ ಸಂಸ್ಕರಣಾ ಸಾಧನವಿದೆ. ಯೆಮನ್‍ನ ತೈಲ ಸಮೃದ್ಧ ಮಾರಿಬ್ ಪ್ರದೇಶದವರೆಗೆ ವಿಸ್ತರಿಸಿರುವ ತೈಲ ಪೈಪ್‍ಲೈನ್‍ನ ಟರ್ಮಿನಸ್ ಆಗಿಯೂ ಈ ಬಂದರು ಕಾರ್ಯನಿರ್ವಹಿಸುತ್ತಿದೆ.
2015ರಲ್ಲಿ ಯೆಮನ್‍ನ ಸರಕಾರವನ್ನು ಹೌದಿಗಳು ರಾಜಧಾನಿ ಯೆಮನ್‍ನಿಂದ ಉಚ್ಛಾಟಿಸಿದ ಬಳಿಕ ರಾಸ್ ಇಸಾ ಬಂದರನ್ನು ತೈಲ ಸಾಗಾಟಕ್ಕೆ ಹೌದಿಗಳು ಬಳಸುತ್ತಿದ್ದಾರೆ. ಬಂದರಿನ ಮೇಲಿನ ವೈಮಾನಿಕ ದಾಳಿಯ ಬಳಿಕ ಬೆಂಕಿಯ ಚೆಂಡು ಆಗಸಕ್ಕೆ ವ್ಯಾಪಿಸಿರುವ ವೀಡಿಯೋವನ್ನೂ ಅಲ್-ಮಸೀರಾ ಟಿವಿ ಪ್ರಸಾರ ಮಾಡಿದೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ `ಯೆಮನ್ ದೇಶವಾಸಿಗಳನ್ನು ಲೂಟಿ ಮಾಡುವ ಜೊತೆಗೆ ಅವರಿಗೆ ತೀವ್ರ ನೋವು ಉಂಟುಮಾಡುತ್ತಿರುವ ಹೌದಿಗಳ ಆರ್ಥಿಕ ಸಂಪನ್ಮೂಲವನ್ನು ಕಡಿತಗೊಳಿಸುವ ಉದ್ದೇಶದಿಂದ ದಾಳಿ ನಡೆಸಲಾಗಿದೆ. ಕೆಂಪು ಸಮುದ್ರ ವಲಯವನ್ನು 10 ವರ್ಷಕ್ಕೂ ಅಧಿಕ ಸಮಯದಿಂದ ಭಯಭೀತಗೊಳಿಸಿದ ಇರಾನ್ ಬೆಂಬಲಿತ ಹೌದಿಗಳ ಅಕ್ರಮ ಆದಾಯ ಮೂಲವನ್ನು ಕಡಿತಗೊಳಿಸಲು ನಮ್ಮ ಪಡೆ ಕಾರ್ಯನಿರ್ವಹಿಸಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.