ಜಗತ್ತಿನಲ್ಲೇ ಅದ್ವಿತೀಯ ಎಂಬ ‘ವಿರಾಟ್ ಕೊಹ್ಲಿ ಮನಸ್ಥಿತಿ’ಯನ್ನು ಯುವಭಾರತ ಹೊಂದಿದೆ : ರಘುರಾಮ್ ರಾಜನ್

Update: 2024-04-17 15:35 GMT

 ರಘುರಾಮ್ ರಾಜನ್ | PC : PTI  

ವಾಶಿಂಗ್ಟನ್ : ಯುವ ಭಾರತವು ವಿರಾಟ್ ಕೊಹ್ಲಿಯಂತೆ ಯೋಚಿಸುತ್ತಿದೆ ಹಾಗೂ ಜಗತ್ತಿನಲ್ಲಿ ಯಾರಿಗಿಂತಲೂ ತಾನು ಕಡಿಮೆ ಅಲ್ಲ ಎಂದು ಅದು ಭಾವಿಸುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ ರಾಜನ್ ಮಂಗಳವಾರ ಹೇಳಿದ್ದಾರೆ.

ಅಮೆರಿಕದ ವಾಶಿಂಗ್ಟನ್ ನಲ್ಲಿನ ಜಾರ್ಜ್ ವಾಶಿಂಗ್ಟನ್ ವಿವಿಯಲ್ಲಿ 2047ರೊಳಗೆ ಸುಧಾರಿತ ಆರ್ಥಿಕತೆಯ ರಾಷ್ಟ್ರವಾಗಿ ಭಾರತದ ನಿರ್ಮಾಣ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡುತ್ತಿದ್ದರು.

‘‘ಭಾರತದ ಯುವಜನರು ವಾಸ್ತವಿಕವಾಗಿ ಜಾಗತಿಕವಾಗಿ ಹೆಚ್ಚು ವಿಸ್ತರಿಸಲು ಬಯಸುತ್ತಿದ್ದಾರೆ. ಜಗತ್ತಿನಲ್ಲೇ ನಾನು ಅದ್ವಿತೀಯನೆಂಬ ವಿರಾಟ್ ಕೊಹ್ಲಿ ಮನಸ್ಥಿತಿಯನ್ನು ಯುವಭಾರತ ಹೊಂದಿದೆಯೆಂದು ನಾನು ಭಾವಿಸುತ್ತೇನೆ’’ಎಂದು ರಘುರಾಮ್ ರಾಜನ್ ಹೇಳಿದರು.

ಹಲವಾರು ಭಾರತೀಯ ನವೋದ್ಯಮಿಗಳು ಅಮೆರಿಕ ಅಥವಾ ಸಿಂಗಾಪುರಗಳಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸಲು ದೇಶವನ್ನು ತೊರೆಯುತ್ತಿದ್ದಾರೆಂದು ಆರ್ಬಿಐನ ಮಾಜಿ ಗವರ್ನರ್ ತಿಳಿಸಿದ್ದಾರೆ.

ಭಾರತದಲ್ಲೇ ಉಳಿಯುವ ಬದಲು, ಅವರು ದೇಶದಿಂದ ಹೊರಗೆ ಹೋಗುವಂತೆ ಯಾವುದು ಅವರನ್ನು ಬಲವಂತಪಡಿಸುತ್ತದೆ ಎಂಬುದನ್ನು ನಾವು ಕೇಳಬೇಕಾಗಿದೆ. ಈ ಉದ್ಯಮಿಗಳ ಜೊತೆ ಮಾತನಾಡುವಾಗ, ಜಗತ್ತನ್ನು ಬದಲಿಸಬೇಕೆಂಬ ಅವರ ಆಶಯವು ಹೃದಯಸ್ಪರ್ಶಿಯಾದುದಾಗಿದೆ. ಆದರೆ ಅವರಲ್ಲಿ ಹೆಚ್ಚಿನವರು ಭಾರತದಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಸಂತುಷ್ಟರಾಗಿಲ್ಲ’’ ಎಂದು ರಾಜನ್ ತಿಳಿಸಿದ್ದಾರೆ.

ನಾವು ಜನಸಂಖ್ಯಾ ಸಂಪತ್ತಿನ ಪ್ರಯೋಜನಗಳನ್ನು ಬಳಸಿಕೊಳ್ಳದಿರುವುದೇ ನಾವು ಎದುರಿಸುತ್ತಿರುವ ಸಮಸ್ಯೆಗಳಾಗಿವೆ ಎಂದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆಯೂ ನಿಜಕ್ಕೂ ಅಧಿಕವಾಗಿದೆ ಹಾಗೂ ಪರೋಕ್ಷ ನಿರುದ್ಯೋಗವು ಇನ್ನೂ ಅಧಿಕವಾಗಿದೆ. ಈ ಕಾರಣಕ್ಕಾಗಿ ಸಾವಿರಾರು ಮಂದಿ ಪಿಎಚ್ಡಿ ಪದವೀಧರರು, ರೈಲ್ವೆಯಲ್ಲಿ ಕಾರಕೂನ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ರಾಜನ್ ವಿಷಾದಿಸಿದರು.

“ದೇಶದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಕಾರ್ಮಿಕರ ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆ ಇದೆ. ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯಂತೂ ಕಳವಳಕಾರಿ ಪ್ರಮಾಣದಲ್ಲಿದೆ. ಆದರೆ ಇತ್ತೀಚಿನ ಸಮಯದಲ್ಲಿ ಕೃಷಿ ಉದ್ಯೋಗಗಳ ಪಾಲು ಹೆಚ್ಚುತ್ತಿದೆ’’ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News