ಝೊಹ್ರಾನ್ ಮಮ್ದಾನಿ ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ: ಬಿಜೆಪಿ ಆರೋಪ
ಝೊಹ್ರಾನ್ ಮಮ್ದಾನಿ | Photo Credit : AP \ PTI
ಹೊಸದಿಲ್ಲಿ: ಬಂಧನದಲ್ಲಿರುವ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ಟಿಪ್ಪಣಿಯೊಂದನ್ನು ರವಾನಿಸಿರುವ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ ಭಾಟಿಯಾ ಅವರು, ಯಾವುದೇ ವ್ಯಕ್ತಿಯು ಆರೋಪಿಯನ್ನು ಬೆಂಬಲಿಸಿ ಭಾರತದ ಆಂತರಿಕ ವಿಷಯಗಳನ್ನು ಟೀಕಿಸಿದರೆ ದೇಶವು ಅದನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಭಾರತದ ಪ್ರಜೆಗಳು ದೇಶದ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದ ಭಾಟಿಯಾ, ‘ನಮ್ಮ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗವನ್ನು ಪ್ರಶ್ನಿಸಲು ಹೊರಗಿನವರಿಗೆ ಯಾವ ಹಕ್ಕಿದೆ? ಅದೂ ಭಾರತವನ್ನು ತುಂಡು ತುಂಡು ಮಾಡಲು ಬಯಸಿದವರನ್ನು ಬೆಂಬಲಿಸಿ? ಇದು ಸರಿಯಲ್ಲ ’ ಎಂದರು.
ಭಾಟಿಯಾ ತನ್ನ ಹೇಳಿಕೆಯಲ್ಲಿ ಮಮ್ದಾನಿ ಅಥವಾ ಖಾಲಿದ್ ಅವರನ್ನು ಹೆಸರಿಸಲಿಲ್ಲ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಭಾಟಿಯಾ, ರಾಹುಲ್ ತನ್ನ ವಿದೇಶ ಪ್ರಯಾಣಗಳ ಸಂದರ್ಭದಲ್ಲಿ ದೇಶದ ವರ್ಚಸ್ಸಿಗೆ ಕಳಂಕವನ್ನುಂಟು ಮಾಡಲು ಬಯಸುವ ಭಾರತ ವಿರೋಧಿ ಶಕ್ತಿಗಳನ್ನು ಭೇಟಿಯಾಗುತ್ತಾರೆ ಮತ್ತು ದೇಶದ ವಿರುದ್ಧ ಸುಳ್ಳುಗಳನ್ನು ಹರಡಲು ಅವರನ್ನು ಉತ್ತೇಜಿಸುತ್ತಾರೆ ಎಂದು ಆರೋಪಿಸಿದರು.
ಮಮ್ದಾನಿ ಅವರು ಉಮರ್ ಖಾಲಿದ್‌ಗೆ ಕೈಬರಹದ ಟಿಪ್ಪಣಿಯೊಂದನ್ನು ಕಳುಹಿಸಿದ್ದಾರೆ ಎಂದು ಖಾಲಿದ್ ಗೆಳತಿ ಬಾನೋಜ್ಯೋತ್ಸ್ನಾ ಲಾಹಿರಿ ಅವರು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದರು. ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಖಾಲಿದ್ ಹೆತ್ತವರಿಗೆ ಮಮ್ದಾನಿ ಈ ಟಿಪ್ಪಣಿಯನ್ನು ಹಸ್ತಾಂತರಿಸಿದ್ದರು.
‘ದ್ವೇಷ ಭಾವನೆಯ ಕುರಿತು ನಿಮ್ಮ ಮಾತುಗಳು ಮತ್ತು ಅದನ್ನು ನಮ್ಮನ್ನು ಆಪೋಷನ ತೆಗೆದುಕೊಳ್ಳಲು ಅವಕಾಶ ನೀಡದಿರುವುದರ ಮಹತ್ವದ ಬಗ್ಗೆ ನಾನು ಆಗಾಗ್ಗೆ ಯೋಚಿಸುತ್ತಿರುತ್ತೇನೆ’ ಎಂದು ಮಮ್ದಾನಿ ಖಾಲಿದ್‌ರನ್ನು ಉದ್ದೇಶಿಸಿ ಟಿಪ್ಪಣಿಯಲ್ಲಿ ಬರೆದಿದ್ದರು. ‘ನಾವೆಲ್ಲ ನಿಮ್ಮ ಬಗ್ಗೆಯೇ ಚಿಂತಿಸುತ್ತಿರುತ್ತೇವೆ’ ಎಂದೂ ಅವರು ಹೇಳಿದ್ದರು.
ಖಾಲಿದ್ ಅವರ ತಂದೆ ಸೈಯದ್ ಕಾಸಿಂ ರಸೂಲ್ ಇಲ್ಯಾಸ್ ಮತ್ತು ತಾಯಿ ಸಾಹಿಬಾ ಖಾನಂ ಅವರು ಕುಟುಂಬದಲ್ಲಿಯ ಮದುವೆಗೆ ಮುನ್ನ ತಮ್ಮ ಇನ್ನೋರ್ವ ಪುತ್ರಿಯನ್ನು ಭೇಟಿಯಾಗಲು ಅಮೆರಿಕಕ್ಕೆ ತೆರಳಿದ್ದರು ಎಂಬ ಮಾಹಿತಿಯನ್ನು ಲಾಹಿರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.