ವಾಡಿ | ಹೊಲಿಗೆ ಯಂತ್ರಗಳು ನೀಡುವಲ್ಲಿ ತಾರತಮ್ಯ ಆರೋಪ :ಎಸಿಸಿ ಕಂಪನಿ ವಿರುದ್ಧ ಮಹಿಳೆಯರಿಂದ ಪ್ರತಿಭಟನೆ
ವಾಡಿ: ಇಂಗಳಗಿ ಗ್ರಾಮದಲ್ಲಿ ಮಹಿಳೆಯರಿಗೆ ಗಾರ್ಮೆಂಟ್ಸ್ ಉದ್ಯೋಗ ಆರಂಭಿಸಲು ಎಸಿಸಿ ಸಿಮೆಂಟ್ ಕಂಪನಿ (ಅದಾನಿ ಗ್ರೂಪ್)ನ ಸಕ್ಷಮ ಸ್ಕಿಲ್ ಡೆವೆಲಪ್ಮೆಂಟ್ ವತಿಯಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ ಎಂಬ ಕಂಪನಿ ಅಧಿಕಾರಿಗಳ ಸುಳ್ಳು ಹೇಳಿಕೆಯನ್ನು ಖಂಡಿಸಿ, ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು ಇಂಗಳಗಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಇಂಗಳಗಿ ಗ್ರಾಮದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮಾತೋಶ್ರಿ ರಾಮಾಬಾಯಿ ಅಂಬೇಡ್ಕರ್ ಮಹಿಳಾ ಒಕ್ಕೂಟಕ್ಕೆ 10 ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ ಎಂದು ಎಸಿಸಿ ಅದಾನಿ ಕಂಪನಿಯ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಶಬ್ಬೀರ್ ಅಹ್ಮದ್ ತಿಳಿಸಿದ್ದಾರೆ. ಆದರೆ ಈ ಕುರಿತು ಒಕ್ಕೂಟದ ಸದಸ್ಯರನ್ನು ಪ್ರಶ್ನಿಸಿದಾಗ, ಯಾವುದೇ ಅಧಿಕೃತ ಮಾಹಿತಿ ಅಥವಾ ಯಂತ್ರಗಳ ವಿತರಣೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಂಪನಿಯು ಮಹಿಳಾ ಒಕ್ಕೂಟಕ್ಕೆ ಸಂಬಂಧಿಸದ ಕೆಲ ಸಂಘಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಿ, ಮಹಿಳೆಯರ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಡಾ. ಸಾಯಬಣ್ಣಾ ಗುಡುಬಾ ಆರೋಪಿಸಿದರು.
ಇಂಗಳಗಿ ಗ್ರಾಮದಲ್ಲಿನ ಮಾತೋಶ್ರಿ ರಾಮಾಬಾಯಿ ಅಂಬೇಡ್ಕರ್ ಮಹಿಳಾ ಒಕ್ಕೂಟದಲ್ಲಿ ಸುಮಾರು 35 ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಎಸಿಸಿ ಅದಾನಿ ಕಂಪನಿ ಈ ಸಂಘಗಳ ಮಹಿಳೆಯರೊಂದಿಗೆ ಯಾವುದೇ ಸಭೆ ನಡೆಸಿಲ್ಲ. ಗಾರ್ಮೆಂಟ್ಸ್ ಉದ್ಯೋಗ ಆರಂಭಿಸುವ ಕುರಿತು ಒಕ್ಕೂಟದ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ, ಸಂಘಕ್ಕೆ ಸಂಬಂಧವಿಲ್ಲದವರ ಮಾತು ಕೇಳಿ ತಮಗೆ ಬೇಕಾದ ಸಂಘಕ್ಕೆ ಮಾತ್ರ ಉದ್ಯೋಗದ ಜವಾಬ್ದಾರಿ ನೀಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಕೆಲವು ಆಯ್ದ ಮಹಿಳೆಯರಿಗೆ ಮಾತ್ರ ಅವಕಾಶ ದೊರೆಯುತ್ತಿದ್ದು, ಉಳಿದ ಮಹಿಳೆಯರನ್ನು ಉದ್ಯೋಗ ಅವಕಾಶದಿಂದ ವಂಚಿಸಲಾಗುತ್ತಿದೆ ಎಂದು ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಶಿಲ್ಲಾ ತೆಳಗೆರಿ ಹಾಗೂ ಖಜಾಂಚಿ ಗಿಡ್ಡಮ್ಮ ಪವಾರ್ ಆರೋಪಿಸಿದರು.
ಪ್ರತಿಭಟನೆಯಲ್ಲಿ ಶಿಲ್ಪಾ ತೆಳಗೆರಿ, ನಾಗಮ್ಮ ಪೂಜಾರಿ, ಮಲ್ಲಮ್ಮ ನಾಲವಾರ, ಯಲ್ಲಮ್ಮ ಕಟ್ಟಿಮನಿ, ಹೇಮಾ ಚನ್ನಗುಂಡ, ಮಮತಾ ನಾಟೀಕಾರ, ಸುನೀತಾ ಮುತ್ತಿಗಿ, ರಿಜವಾನಾ ಬೇಗಂ, ಸುನೀತಾ ಪವಾರ್, ಸೋನಾ ಪವಾರ್, ಜೀವಮ್ಮ ತೆಳಗೆರಿ ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.
ಪಂಚಾಯತ್ ಕಾರ್ಯದರ್ಶಿ ಸಂಗಮೇಶ ಹೀರೆಮಠ ಅವರು ಮಹಿಳೆಯರ ಮನವಿ ಪತ್ರವನ್ನು ಸ್ವೀಕರಿಸಿ, ಕಂಪನಿಗೆ ಪತ್ರ ಬರೆದು ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.