×
Ad

ಅಫಜಲಪುರ | ಏಕಕಾಲಕ್ಕೆ ಮೂರು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Update: 2026-01-07 19:35 IST

ಅಫಜಲಪುರ : ಪಟ್ಟಣದಲ್ಲಿನ ತಹಶೀಲ್ ಕಚೇರಿ, ಪುರಸಭೆ ಹಾಗೂ ಉಪನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಿಢೀರ್‌ ದಾಳಿ ನಡೆಸಿ, ವಿವಿಧ ಕಡತಗಳನ್ನು ಪರಿಶೀಲಿಸಿ ತಪ್ಪುಗಳು ಕಂಡುಬಂದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು, ರಾಮನಗರ ಹಾಗೂ ಗದಗ ಲೋಕಾಯುಕ್ತ ವಿಭಾಗದ ಮೂರು ತಂಡಗಳು ಕಚೇರಿಗಳು ಆರಂಭವಾಗುತ್ತಿದ್ದಂತೆಯೇ ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ನಡೆಸಿತು. ದಿನನಿತ್ಯದ ನೋಂದಣಿ ಪುಸ್ತಕವನ್ನು ಸರಿಯಾಗಿ ನಿರ್ವಹಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತಕ್ಷಣದಿಂದಲೇ ನೋಂದಣಿ ಪುಸ್ತಕ ಬರೆಯುವಂತೆ ದ್ವಿತೀಯ ದರ್ಜೆ ಸಿಬ್ಬಂದಿ ಜಯಪುತ್ರ ರಾಜೋಳ್ಕರ್ ಅವರಿಗೆ ಸೂಚನೆ ನೀಡಿದರು.

ಕಚೇರಿಯಲ್ಲಿ ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯಗಳ ಕೊರತೆ ಹಾಗೂ ದಲ್ಲಾಳಿಗಳ ಹಾವಳಿ ಕುರಿತು ಉಪನೋಂದಣಾಧಿಕಾರಿ ಪ್ರಕಾಶ್ ಪವಾರ್ ಅವರಿಗೆ ಲೋಕಾಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು. ನ್ಯೂನತೆ ಕಂಡುಬಂದ ದಾಖಲೆಗಳನ್ನು ದೃಢೀಕರಿಸಿ ವಶಕ್ಕೆ ಪಡೆಯಲಾಯಿತು.

ಪುರಸಭೆ ಕಚೇರಿಯಲ್ಲಿ ಸಿಬ್ಬಂದಿಗಳ ಮೊಬೈಲ್ ಪರಿಶೀಲನೆ :

ಬೆಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ವಿಜಯಕುಮಾರ ಕೆ.ಸಿ. ನೇತೃತ್ವದ ತಂಡ ಪುರಸಭೆ ಕಚೇರಿಗೆ ದಾಳಿ ನಡೆಸಿ, ಸಿಬ್ಬಂದಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಡಿಜಿಟಲ್ ಹಣಕಾಸು ವಹಿವಾಟುಗಳ ಪರಿಶೀಲನೆ ನಡೆಸಿತು. ಈ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ತಹಶೀಲ್ ಕಚೇರಿಯಲ್ಲಿ ಸಾರ್ವಜನಿಕ ಸೇವೆಗಳ ಪರಿಶೀಲನೆ :

ರಾಮನಗರ ಲೋಕಾಯುಕ್ತ ಸಬ್‌ಇನ್ಸ್‌ಪೆಕ್ಟರ್ ವಿಜಯಕುಮಾರ ಕೃಷ್ಣ ನೇತೃತ್ವದ ತಂಡ ತಹಶೀಲ್ ಕಚೇರಿಯಲ್ಲಿ ದಾಖಲೆ ಹಾಗೂ ದಾಸ್ತಾನು ಪರಿಶೀಲನೆ ನಡೆಸಿ, ಜನನ–ಮರಣ ಪ್ರಮಾಣ ಪತ್ರ, ಸಿಂಧುತ್ವ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಶೌಚಾಲಯದ ಕೊರತೆ ಕುರಿತು ಪ್ರಶ್ನಿಸಿದಾಗ, ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು, “ಹೊಸ ಶೌಚಾಲಯ ನಿರ್ಮಾಣವಾಗಿದ್ದು, ಶೀಘ್ರವೇ ಉದ್ಘಾಟನೆ ಮಾಡಲಾಗುವುದು” ಎಂದು ತಿಳಿಸಿದರು.ಸ್ಮಶಾನ ಭೂಮಿ ಅಕ್ರಮ ವರ್ಗಾವಣೆ ಆರೋಪ

ಈ ಸಂದರ್ಭದಲ್ಲಿ ಬಳೂರ್ಗಿ ಗ್ರಾಮದ ಸರ್ವೆ ನಂ.423ರಲ್ಲಿನ ಸ್ಮಶಾನದ 30 ಗುಂಟೆ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಕಾನೂನುಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಜಿಲ್ಲಾ ಅಧ್ಯಕ್ಷ ರಮೇಶ್ ನಾಟೀಕಾರ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.

ಮೂಟೆಗಟ್ಟಲೇ ದಾಖಲೆ ಸಲ್ಲಿಸಿದ ಮಳೇಂದ್ರ ಡಾಂಗೆ :

ಅಫಜಲಪುರ ಪುರಸಭೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ವೇಳೆ, ಪುರಸಭೆ ಮಾಜಿ ಸದಸ್ಯ ಮಳೇಂದ್ರ ಡಾಂಗೆ ಅವರು ಮೂಟೆಗಟ್ಟಲೇ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಸಾರ್ವಜನಿಕ ಆಸ್ಪತ್ರೆ ಎದುರು ಶೌಚಾಲಯ ನಿರ್ಮಾಣದ ವಿರುದ್ಧ ಕ್ರಮ ಜರುಗಿಸದಿರುವುದು, ಗಾರ್ಡನ್ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು, ನಕಲಿ ಖಾತಾ ಸೃಷ್ಟಿ, ಒಂದೇ ವ್ಯಕ್ತಿಗೆ ಎರಡು ಜಾತಿ ಪ್ರಮಾಣ ಪತ್ರ ನೀಡಿರುವುದು ಸೇರಿದಂತೆ ಹಲವು ಅಕ್ರಮಗಳ ಕುರಿತು ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News